ಚಾಮರಾಜನಗರ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಚಿಕ್ಕಹೊಳೆ ಸುವರ್ಣಾವತಿ ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗುವ ಹಿನ್ನೆಲೆ ಮತ್ತು ಕಾವೇರಿ ನದಿಗೆ ನೀರು ಬಿಡುಗಡೆ ಸಂಭವ ಕಾರಣದಿಂದ ಜಿಲ್ಲಾದ್ಯಂತ ಅಗತ್ಯವಿರುವ ಕಡೆ ಪರಿಹಾರ ಕಾರ್ಯಾಚರಣೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿಯವರು ಅಧಿಕಾರಿಗಳೊಂದಿಗೆ ನೇರವಾಗಿ ಹಾಗೂ ವೀಡಿಯೋ ಸಂವಾದದ ಮೂಲಕ ಮಳೆ ಹಾಗೂ ಜಲಾಶಯಗಳ ಭರ್ತಿ ಸಂಭವ ಸಂಬಂಧ ವಹಿಸಬೇಕಿರುವ ಅಗತ್ಯ ಕ್ರಮಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗುತ್ತಿರುವುದನ್ನು ತಡೆಯಬೇಕು. ಮನೆಯ ಗೋಡೆಗಳು ಸದೃಢವಾಗಿಲ್ಲದಿರುವುದು ಕಂಡು ಬಂದರೆ ಜನರನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ರಸ್ತೆಗಳಲ್ಲಿ ನೀರು ಹೆಚ್ಚು ಆವೃತಗೊಂಡಿದ್ದಲ್ಲಿ ಅಂತಹ ಕಡೆ ಸಂಚಾರ ನಿಬಂಧಿಸಿ ಬದಲಿ ವ್ಯವಸ್ಥೆ ಮಾಡಬೇಕು. ಜಲಾಶಯ ನದಿ ವ್ಯಾಪ್ತಿಯ ಗ್ರಾಮಗಳೂ ಸೇರಿದಂತೆ ನಗರ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುಂಜಾಗ್ರತಾ ಬಗ್ಗೆ ಮನವರಿಕೆ ಮಾಡಿ ಸುರಕ್ಷಿತ ಕ್ರಮಗಳಿಗೆ ತಕ್ಷಣವೇ ಧಾವಿಸಿ ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ನಗರ, ಪಟ್ಟಣ, ತಾಲೂಕು ಸೇರಿದಂತೆ ಎಲ್ಲೆಡೆ ಅಧಿಕಾರಿಗಳು ಕಟ್ಟೆಚ್ಚೆರದಿಂದ ಇರಬೇಕು. ಕೇಂದ್ರ ಸ್ಥಾನಗಳಲ್ಲಿಯೇ ಇದ್ದು ಮಳೆ ಹಾಗೂ ನದಿ ಜಲಾಶಯಗಳ ನೀರು ಬಿಡುಗಡೆಯಿಂದ ಉಂಟಾಗುವ ಯಾವುದೇ ಸಮಸ್ಯೆ ತೊಂದರೆಗಳಿಗೆ ಕೂಡಲೇ ಪರಿಹಾರ ಕಾರ್ಯಾಚರಣೆಗಳಿಗೆ ಮುಂದಾಗಬೇಕು. ಪ್ರಸ್ತುತ ಕೆಲವೆಡೆ ಮಳೆಯಿಂದ ನೀರು ಹರಿಯುತ್ತಿರುವ ಹಾಗೂ ಆವೃತ ವಾಗುತ್ತಿರುವ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆಯನ್ನು ಚುರುಕಿನಿಂದ ನಡೆಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮಳೆ ಹಾಗೂ ಜಲಾಶಯಗಳ ನೀರು ಬಿಡುಗಡೆಯಿಂದ ಸಮಸ್ಯೆಗೆ ಸಿಲುಕುವ ಗ್ರಾಮ ಪ್ರದೇಶಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಬೇಕು. ಶಾಲೆ, ಅಂಗನವಾಡಿ ಕಟ್ಟಡಗಳು ಶಿಥಿಲವಿರುವ ಕಡೆ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ವಿದ್ಯುತ್ ಅವಘಡಗಳು ಸಂಭವಿಸದಂತೆ ವಿದ್ಯುತ್ ಪರಿವರ್ತಕಗಳು ಕಂಬಗಳು ಸುಸ್ಥಿತಿಯಲ್ಲಿ ಇವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಸಂದರ್ಭಕ್ಕೆ ಅನುಗುಣವಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳಿಗೆ ನಿಗಾ ವಹಿಸಬೇಕು ಎಂದರು.
ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಕೆರೆ ಪ್ರದೇಶಗಳ ವ್ಯಾಪ್ತಿಯಲ್ಲಿ ಕಣ್ಗಾವಲು ಇರಬೇಕು. ಕೆರೆ ತುಂಬಿ ಯಾವುದೇ ಅಪಾಯಗಳಿಗೆ ಕಾರಣವಾಗದಂತೆ ನೀರಾವರಿ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಕಾರ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲಿಸಬೇಕು. ಅವಶ್ಯಕ ಮುಂಜಾಗ್ರತಾ ಹಾಗೂ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಕಂದಾಯ ಇಲಾಖೆ, ಪೊಲೀಸ್, ಅಗ್ನಿಶಾಮಕದಳ, ಆರೋಗ್ಯ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಯ ಜವಾಬ್ದಾರಿ ಅತಿ ಮುಖ್ಯವಾಗಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಸಮನ್ವಯ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲಾ ಭಾಗದಲ್ಲೂ ಪ್ರಸ್ತುತ ಸಂದರ್ಭದ ಮಾಹಿತಿಯನ್ನು ನಿರಂತರವಾಗಿ ನೀಡಬೇಕು. ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಜನರಿಗೆ ತಕ್ಷಣವೇ ಸ್ಪಂದಿಸಬೇಕು. ಯಾವುದೇ ಭಾಗದಲ್ಲಿ ಮಳೆ, ಇನ್ನಿತರ ತೊಂದರೆಗಳು ಉಂಟಾಗುವ ಮೊದಲೇ ಧಾವಿಸಿ ಅಗತ್ಯ ನೆರವು ಕ್ರಮಗಳಿಗೆ ಮುಂದಾಗಬೇಕು. ಮನೆ ಇನ್ನಿತರ ಆಸ್ತಿ ಪಾಸ್ತಿ ಹಾನಿ ಸಂಭವಿಸದಂತೆ ಮೊದಲೇ ಸುರಕ್ಷಿತ ಸ್ಥಳಗಳಿಗೆ ಜನರನ್ನು ಕರೆದೊಯ್ಯಬೇಕು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಜಿಲ್ಲೆಯ ಜನರು ಮಳೆ ಹಾಗೂ ಜಲಾಶಯಗಳಿಂದ ನೀರು ಬಿಡುಗಡೆ ಸಂದರ್ಭದಲ್ಲಿ ಎಲ್ಲಾ ಅಗತ್ಯ ಸುರಕ್ಷಿತ ಕ್ರಮಗಳನ್ನು ವಹಿಸುವ ಮೂಲಕ ಜಿಲ್ಲೆಯ ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ನಾಗರಾಜು, ತಹಶೀಲ್ದಾರರಾದ ಬಸವರಾಜು, ಆನಂದಯ್ಯ, ರವಿಶಂಕರ್, ಆನಂದಪ್ಪನಾಯಕ, ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್, ಶ್ರೀಕಂಠೇರಾಜೇಅರಸ್, ಶ್ರೀನಿವಾಸ್, ಮಹೇಶ್, ಅಗ್ನಿಶಾಮಕದಳ ಅಧಿಕಾರಿ ನವೀನ್ ಕುಮಾರ್, ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
