ಚಾಮರಾಜನಗರ: ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ರಾಮ್ ಅವರ ಕೊಡುಗೆಯನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ೩೬ನೇ ಪುಣ್ಯಸ್ಮರಣೆಯಲ್ಲಿ ಕಾರ್ಯಕ್ರಮದ ದೀಪ ಬೆಳಗಿಸಿ, ಬಾಬೂಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ದೇಶದ ಪ್ರಬುದ್ದ ರಾಜಕಾರಣಿಯಾಗಿದ್ದ ಬಾಬೂಜಿಯವರು ಕಾನೂನು, ಆಹಾರ, ಕಾರ್ಮಿಕ ಇಲಾಖೆಗಳೂ ಸೇರಿದಂತೆ ವಿವಿಧ ಖಾತೆಗಳನ್ನು ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸಮರ್ಪಕವಾಗಿ ನಿಭಾಯಿಸಿ ದೇಶದ ಶೋಷಿತ ವರ್ಗದವರಿಗೆ ದನಿಯಾಗಿದ್ದವರು. ಶೋಷಿತರ ದೀನ ದಲಿತರ ಕಲ್ಯಾಣಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ ಬಾಬು ಜಗಜೀವನ್‌ರಾಮ್ ಅವರ ಹೋರಾಟದ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗುಡೂರು ಭೀಮಾಸೇನ ಅವರು ದಿಟ್ಟತನ ಎಂಬುದು ಬಾಬೂಜೀ ಅವರ ವಿಶೇಷ ಗುಣವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಇತರರಿಗಿರುವ ಸೌಲಭ್ಯ ಸವಲತ್ತುಗಳು ಶೋಷಿತ ವರ್ಗದವರಿಗೆ ಏಕಿಲ್ಲ ಎಂದು ಪ್ರಶ್ನೆ ಮಾಡುವ ಹಾಗೂ ಶೋಷಿತರ ದಬ್ಬಾಳಿಕೆ ವಿರುದ್ದ ಸೆಟೆದು ನಿಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಶೋಷಿತರ ಪರವಾಗಿ ದನಿ ಎತ್ತಿದವರಲ್ಲಿ ಬಾಬೂಜಿಯವರು ಪ್ರಮುಖರಾಗಿದ್ದಾರೆ ಎಂದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಅವರುಗಳು ಶೋಷಿತ ಸಮುದಾಯದವರ ಎರಡು ಕಣ್ಣಿದ್ದಂತೆ. ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಗಜೀವನ್ ರಾಮ್ ಅವರು ೩ನೇ ಪಂಚವಾರ್ಷಿಕ ಯೋಜನೆ ಅನುಷ್ಠಾನ ಸಂದರ್ಭ ಬರಗಾಲದಿಂದ ನರಳುವಂತಹ ಸ್ಥಿತಿಯಲ್ಲಿ ಬಡವರ ಪರವಾಗಿ ವಾರ್ಷಿಕ ಯೋಜನೆಯಡಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾದರು. ಕೃಷಿ ಕ್ಷೇತ್ರದಲ್ಲಿ ಜ್ಞಾನ, ವಿಜ್ಞಾನ, ತಾಂತ್ರಿಕ ಜ್ಞಾನ ಹಾಗೂ ತಂತ್ರಾಂಶ ಅಳವಡಿಸಿ ಹಸಿರುಕ್ರಾಂತಿಯನ್ನು ಜಾರಿಗೊಳಿಸಿದರು ಎಂದು ಗುಡೂರು ಭೀಮಾಸೇನ ಅವರು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮುಖಂಡರಾದ ಅರಕಲವಾಡಿ ನಾಗೇಂದ್ರ ಹಾಗೂ ಕಾಂತರಾಜು ಅವರು ಡಾ. ಬಾಬು ಜಗಜೀವನರಾಮ್ ಅವರ ದೇಶಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ ಬಾಬೂಜಿ ಅವರ ಜೀವನ ಸಾಧನೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ತಿಮ್ಮರಾಜು, ಮುಖಂಡರಾದ ಬಸವನಪುರ ರಾಜಶೇಖರ್, ಆಲೂರು ಮಲ್ಲು, ಚಾ.ಗು. ನಾಗರಾಜು, ಶ್ರೀಕಂಠ, ಎಂ. ಶಿವಕುಮಾರ್, ರಾಚಯ್ಯ, ಕರಿಯಪ್ಪ, ಗಿರಿ, ಡ್ಯಾನ್ಸ್ ಬಸವರಾಜು, ವೆಲ್ಡಿಂಗ್ ನಿಂಗರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.