ಭೂತಕಾಲದ ಘಟನೆಗಳು ವರ್ತಮಾನ ಮತ್ತು ಭವಿಷ್ಯದ ಸಂಗತಿಗಳನ್ನು ತಿಳಿಗೊಳಿಸುತ್ತದೆ ಅಥವಾ ಅದರಿಂದ ತಿದ್ದುವ ಕೆಲಸವಾಗುತ್ತದೆ. ಈ ಕೆಲಸವಾಗುವುದು ನಮ್ಮ ಭೌದ್ಧಿಕತೆಯ ಮೂಲಕ, ನಮ್ಮ ಮಾನವೀಯ ನೆಲೆಗೆ ಆ ಇತಿಹಾಸದ ಘಟನೆಗಳಿಂದ ತಿಳಿದ ನೀತಿಯನ್ನು ಮರುಕಳಿಸಿಕೊಂಡಾಗ ಮಾತ್ರ ಸಾಧ್ಯ. ಭರತ ಬಾಹುಬಲಿ ಯುದ್ಧ ಪ್ರಸಂಗವು ನಮ್ಮ ನೆನಪಿನ ಪುಟದ ಬಹುದೊಡ್ಡ ಅರಿವು. ಭರತ ಬಾಹುಬಲಿಯರ ನಡುವಿನ ಯುದ್ಧದಲ್ಲಿ ಆಗಿನ ಮಂತ್ರಿಗಳ ಉಪಸ್ಥಿತಿ ವಿವೇಚನಾಪೂರ್ವವಾಗಿತ್ತು.

ಯುದ್ಧದ ಸಮಕಾಲೀನ ಪರಿಸ್ಥಿತಿಯನ್ನು ಎಷ್ಟು ಸುಲಭಗೊಳಿಸಿದ್ದರೆಂದರೆ ಆ ಯುದ್ಧದಲ್ಲಿ ನ್ಯಾಯ, ಧರ್ಮ ಔನತ್ಯಕ್ಕೇರಿತ್ತು. ಮುಗ್ಧಜೀವಗಳು ಅಪಾಯದಿಂದ ಬದುಕುಳಿದಿದ್ದವು. ಇಂದಿನ ಮಂತ್ರಿಗಳಿಗೆ ಈ ಪ್ರಜ್ಞೆ ತಿಳಿಯದಾಗಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವೊಂದೇ ಅವರ ಗುರುತಾಗಿದೆ.

ಯುದ್ಧವಿರುವುದು ಭರತ ಬಾಹುಬಲಿ ನಿಮ್ಮೊಡನೆ, ನಿಮ್ಮಿಬ್ಬರ ಸೆಣಸಾಟದಲ್ಲಿ ಏನೂ ಅರಿಯದ ಯಾವುದೇ ದ್ವೇಷವಿರದ ಮುಗ್ಧ ಜನಗಳನ್ನು ಬಳಸಿಕೊಳ್ಳುವುದು ಅಪರಾಧ. ನಿಮಗೆ ರಾಜ್ಯಲಕ್ಷ್ಮೀಯ ಮೋಹವಿದ್ದರೆ ನೀವಿಬ್ಬರೇ ಹೋರಾಡಿ ಎಂದು, ಅವರಿಬ್ಬರ ನಡುವೆ ಮಲ್ಲಯುದ್ಧ, ದೃಷ್ಟಿಯುದ್ಧ, ಜಲಯುದ್ಧಗಳನ್ನು ಏರ್ಪಡಿಸಲಾಗುತ್ತದೆ. ಗೆದ್ದಿದ್ದು ಬಾಹುಬಲಿ, ಸೋತಿದ್ದು ಅಣ್ಣನಾದ ಭರತ. ಚಕ್ರರತ್ನವನ್ನು ಭರತ ಕೊನೆಯ ಅಸ್ತ್ರವಾಗಿ ಬಳಸಿದಾಗಲೂ ಗೆಲ್ಲುವುದು ಮಾತ್ರ ಬಾಹುಬಲಿ. ಗೆದ್ದ ಬಾಹುಬಲಿ ವೈರಾಗ್ಯಮೂರ್ತಿಯಾಗಿ ರಾಜ್ಯ ತೊರೆದ. ಇದನ್ನು ಕಂಡ ಭರತನಿಗೆ ಮನುಷ್ಯತ್ವ ಅರಿವಾಯಿತು.

ಆ ಅರಿವು ಅವತ್ತಿಗೆಯೇ ಮುಗಿದು ಹೋದ ಅರಿವಲ್ಲ. ಈ ಭೂಮಿಯ ನಿತ್ಯ ಜೀವಂತಿಕೆಯಲ್ಲೂ ಅನ್ವಯವಾಗುವ ಅರಿವು. ಹಲವು ಯುದ್ಧಗಳು, ಪೂರ್ವ ಪುರಾಣಗಳ ಯುದ್ಧ ಅರಿವಿನ ನಂತರವೂ ಜರುಗಿಹೋಯ್ತು. ಮುಗ್ಧ ಜೀವಗಳ ಬಲಿಗಳೊಂದಿಗೆ ಸ್ವಾರ್ಥ ಜನರ ಯಾಗವೇರ್ಪಟ್ಟಿತು. ಅದು ಮುಂದುವರೆದು ನಮ್ಮಗಳಿಗೆ ಹತ್ತಿರವಾಗಿ ಗ್ರಹಿಕೆಗೆ ಇರುವುದು ಮೊದಲನೇ ಮಹಾಯುದ್ಧ, ಎರಡನೇ ಮಹಾಯುದ್ಧ. ಈ ಯುದ್ಧಗಳ ಘೋರತೆ ಇಡೀ ಭೂಮಂಡಲವನ್ನು ಛಿದ್ರಗೊಳಿಸುವುದರಲ್ಲಿತ್ತು, ಸದ್ಯ ಈ ಜಗತ್ತಿನ ಮುಂದುವರಿಕೆಗೆ ಬುದ್ಧಿ ಜೀವಿಗಳ ಮಧ್ಯಸ್ಥಿಕೆ ದೊರಕಲಾಗಿ ಆ ಯುದ್ಧಗಳಿಗೆ ವಿರಾಮ ಬಿದ್ದಿತು. ವಿಶ್ವ ಶಾಂತಿಗೆ ಸ್ಥಾನ ದೊರಕಿತು.

ಶೀಥಲ ಸಮರದ ಜ್ವಾಲಾಮುಖಿಗಳು ಈಗಲೂ ಅಲ್ಲಲ್ಲಿ ಇರಲು ಮತ್ತು ಅವು ಒಂದೊಂದು ಬಗೆಯಲ್ಲಿ ಹೊರಜಿಗಿಯುತ್ತಿರಲು ಈ ಜ್ವಾಲೆಗಳ ಮಹಾ ಸ್ಪೋಟವೇ ಮೂರನೇ ಮಹಾಯುದ್ಧವಾಗಬಹುದು. ಆದರೆ ಈ ಮೂರನೇ ಮಹಾಯುದ್ಧವು ಈವರೆಗೆ ತಡೆದಿದ್ದ ಮತ್ತು ಈ ಮುಂಚೆಯೇ ಆಗಬೇಕಿದ್ದ ಭೂಮಂಡಲದ ಛಿದ್ರಕ್ಕೆ  ಕಾರಣ ವಾಗುವುದಂತೂ ಖಂಡಿತ. ಈಗಿನ ನೆನ್ನೆ ಮೊನ್ನೆಯ ಯುದ್ಧದ ಕಾವಾಗಿರುವ ರಷ್ಯಾ ಮತ್ತು ಉಕ್ರೇನ್ ದೇಶಗಳ ಯುದ್ಧವು ಈ ಬಗೆಯಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಯಾವುದೇ ಸಂದರ್ಭದಲ್ಲಿ ಯುದ್ಧದ ಸ್ವರೂಪ ಎಲ್ಲಾ ಕಡೆ ಕಾಡ್ಗಿಚ್ಚಿನಂತೆ ಹರಡಬಹುದು. ಸಶಕ್ತ ಯುದ್ಧ ಸೌಕರ್ಯಗಳ ಬಲಿಷ್ಠ ರಾಷ್ಟ್ರಗಳು ಎದುರಾಗುವುದಕ್ಕೆ ಇಂತಹುದೇ ಕಾರಣ ಎನ್ನಬೇಕಿಲ್ಲ. ಧಾರ್ಮಿಕ ,ಆರ್ಥಿಕ, ರಾಜಕೀಯ, ಖಾಸಗಿ ಉದ್ಯಮಿಗಳ  ದುರ್ಲಾಭಗಳ ಕಿಡಿಗಳು ಏನನ್ನಾದರೂ, ಎಲ್ಲಿಂದ ಎಲ್ಲಿಗಾದರೂ ಯುದ್ಧದ ಸ್ವರೂಪವನ್ನು ಕೊಂಡೊಯ್ಯಬಹುದಾಗಿದೆ.

               

ಇಲ್ಲಿ ಮುನ್ನೆಚ್ಚರಿಕೆಯು ಅಗತ್ಯ. 

ಈ ಮುನ್ನೆಚ್ಚರಿಕೆಯ ಅಗತ್ಯವನ್ನು ಪಂಪ ತನ್ನ ಬರವಣಿಗೆಯ ವಿವೇಚನೆಯಲ್ಲಿ ಆಗಲೇ ಕಾಣಿಸಿದ್ದ. ಆದಿಪುರಾಣ ಕೃತಿಯ ಭರತ ಬಾಹುಬಲಿ ಪ್ರಸಂಗದ ಸ್ವರೂಪ ನಮಗೆ ಒದುಗುವುದೇ ಇಲ್ಲ ಎಂದು ನಂಬುವುದು, ವಾದಿಸುವುದು ದಡ್ಡತನ. ಆ ನಿಟ್ಟಿನಲ್ಲಿ ನಮ್ಮಿಂದ ಪರರಿಗಾಗುವ ಅಪಾಯದ ಬಗ್ಗೆ ನಮಗೆ ಎಚ್ಚರವಿಲ್ಲದಿದ್ದಲ್ಲಿ ಪಶ್ಚಾತ್ತಾಪವು ಕೂಡ ಬಂದೊದುಗುತ್ತದೆ. ಆ ನಂತರ ಮರುಗಿದರೆ ಆ ಪಶ್ಚಾತ್ತಾಪಕ್ಕೆ ಅರ್ಥವಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ 1945ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಜಪಾನ್ ದೇಶದ  ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಬಾಂಬ್ ದಾಳಿಯ ಆಂದೋಲನ ಕೈಗೊಂಡಿದಕ್ಕೆ ಅಮೆರಿಕ ರಾಷ್ಟ್ರ ಜಗತ್ತಿನ ಮುಂದೆ ಇಂದಿಗೂ ತಲೆತಗ್ಗಿಸುವಂತಾಗಿದೆ. ತನ್ನೊಳಗೆ ಇಂದಿಗೂ ಒಂದು ಪಶ್ಚಾತ್ತಾಪದ ಕುರುಹನ್ನು ನೆನೆದುಕೊಂಡೇ ಬರುತ್ತಿದೆ. ಆ ಮಟ್ಟದಲ್ಲಿ ಮುಗ್ಧ ಜನರ ಪ್ರಾಣವನ್ನು ಆ ಒಂದು ಘಟನೆ ನುಂಗಿ ಹಾಕಿತ್ತು. ಅಂದಾದ ಕ್ರೂರತೆಗೆ ಹಿರೋಷಿಮಾ ಮತ್ತು ನಾಗಸಾಕಿಯ ನಿವಾಸಿಗರು ಪೀಳಿಗೆಯಿಂದ ಪೀಳಿಗೆಗೆ ಆ ಗಾಯದ ಗುರುತುಗಳನ್ನು ಉಳಿಸಿಕೊಂಡು ಬರುವಂತಾಗಿದೆ. ಇದೇ ಮಾದರಿಯ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ನಡುವೆ ಮತ್ತೊಮ್ಮೆ ಭಯಾನಕವಾಗಿ ತೊಂದರೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ‌. ಜತೆಗೆ ರಷ್ಯಾ ಕೂಡ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪದ ಹಾದಿ ಹಿಡಿಯುವುದರಲ್ಲಿ ಆಶ್ಚರ್ಯವೇನಿಲ್ಲ.

ಈಗಾಗಲೇ ರಷ್ಯಾದ ಜನರೇ ಉಕ್ರೇನ್ ಜನರ ಮೋಕ್ಷಕ್ಕಾಗಿ ಕಣ್ಣೀರಿಟ್ಟಿದ್ದಾರೆ. ಶಾಂತಿಗಾಗಿ, ಯುದ್ಧದ ವಿರಾಮಕ್ಕಾಗಿ ರಷ್ಯಾ ಜನತೆ ತಮ್ಮ ಸರ್ಕಾರವನ್ನು ಮನವಿ ಮಾಡಿದ್ದಾರೆ. ಈ ಚಿತ್ರಣಗಳು ನಮಗೆ ಸಾಮಾಜಿಕ ಜಾಲತಾಣದಲ್ಲಿ ಹೃದಯ ಕಲುಕುವ ದೃಶ್ಯಗಳಾಗಿ ಸಿಗುತ್ತಿವೆ. ಉಕ್ರೇನ್ ರಾಷ್ಟ್ರದಲ್ಲೂ ಅಮಾಯಕರ ರೋಧನೆ ಮುಗಿಲು ಮುಟ್ಟಿದೆ. ಆ ಬಾಂಬ್ ಸ್ಫೋಟದ ಸದ್ದಿಗಿಂತಲೂ, ಸ್ಫೋಟಕ್ಕೆ ಒಳಗಾದ ಗಾಯಾಳುಗಳ ರೋಧನೆಯ ಸದ್ದೇ ಜೋರಾಗಿದೆ. ಇಲ್ಲಿ ಎರಡೂ ರಾಷ್ಟ್ರಗಳ ಅಧಿಕಾರದ ಒಳಿತು ಕೆಡುಕುಗಳ ಪ್ರಶ್ನೆಗಿಂತ ಮತ್ತು ತಪ್ಪು ಸರಿಗಿಂತ ಮಾನವೀಯ ನೆಲೆಯು ಮುಖ್ಯವಾಗಿದೆ. ಆ ದೇಶಗಳ ನಾಯಕರು ಸ್ವಾರ್ಥ ರಾಜಕೀಯ ದುರುದ್ದೇಶವನ್ನು ಈ ರೀತಿಯಾಗಿ ಜನಸಾಮಾನ್ಯರ ಮೇಲೆ ಪ್ರಭಾವಿಸುವುದು ಸರಿಯಲ್ಲ.

ಪಂಪನ ಆದಿಪುರಾಣದಲ್ಲಿ ಒಂದು ವಿವೇಚನೆಯಿದೆ. ಅಮಾಯಕರನ್ನು ರಕ್ಷಣಾತ್ಮಕವಾಗಿ ಬದಿಗಿರಿಸಿ ಮುಖ್ಯ ನಾಯಕರು ತಿಳಿದವರ ಮಧ್ಯಸ್ಥಿಕೆಯಲ್ಲಿ ಮಾತ್ರ ತಮ್ಮ ಸ್ವಹಿತಾಸಕ್ತಿಗಳಿಗೆ ಎದುರುಬದುರಾಗುವ ಸನ್ನಿವೇಶವನ್ನು ಒಪ್ಪಿರುವುದು. ಆ ನಂತರ ಅದೂ ಕೂಡ ಒಂದು ರೀತಿಯಲ್ಲಿ ತಪ್ಪೇ ಎಂದು ತಿಳಿಸಿಕೊಟ್ಟಿರುವುದು. ಈ ಪ್ರಜ್ಞೆಯನ್ನು ವಿಶ್ವದ ನಾಯಕರು ಅನುಸರಿಸುವುದು ನಿಸರ್ಗದ ದೃಷ್ಟಿಯಿಂದ ಮತ್ತು ಮನುಷ್ಯತ್ವದ ದೃಷ್ಟಿಯಿಂದ ಬಹಳವೇ ಒಳ್ಳೆಯದು. ಇಲ್ಲವಾದಲ್ಲಿ ಕಳಿಂಗ ಯುದ್ಧದಲ್ಲಿ ಅಶೋಕ ಸಾಮ್ರಾಟ್ ಕಂಡ ರಕ್ತಪಾತದ ಧಾರುಣ ಘಟನೆಯನ್ನು ಮತ್ತು ಹಿಟ್ಲರ್ ತನ್ನ ನಿರಂಕುಶ ಪ್ರಭುತ್ವದಲ್ಲಿ ಕಂಡ ಹಿಂಸಾತ್ಮಕ ಕೃತ್ಯವನ್ನು ಈಗಿನ ವಿಶ್ವನಾಯಕರು ಎದುರು ನೋಡಬೇಕಾಗುತ್ತದೆ. ಅಪಾಯಕ್ಕೂ ಮೊದಲು ತಿಳಿಯಾಗುವುದೇ ಒಳ್ಳೆಯದೆಂದು ಸಾರಿರುವ ಭರತ ದೇಶದ, ಕನ್ನಡ ನಾಡಿನವನಾದ ಪಂಪನ ವಿಶ್ವಶಾಂತಿ ವಿವೇಕ ಪ್ರಜ್ಞೆ ಇದೀಗ ವಿಶ್ವಕ್ಕೆ ಅಗತ್ಯವಾಗಿದೆ.

ಚಿಮಬಿಆರ್ (ಮಂಜುನಾಥ ಬಿ.ಆರ್)

ಯುವಸಾಹಿತಿ, ಸಂಶೋಧಕ, ವಿಮರ್ಶಕ.

ಹೆಚ್.ಡಿ.ಕೋಟೆ ಮೈಸೂರು.

ದೂರವಾಣಿ ಸಂಖ್ಯೆ:-8884684726

By admin