ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಅಪೌಷ್ಠಿಕತೆ ದೊಡ್ಡ ಸಮಸ್ಯೆಯಾಗಿದ್ದು, ಪೌಷ್ಠಿಕ ಆಹಾರ ಸೇವನೆ ಬಗ್ಗೆ ಗ್ರಾಮೀಣ ಪ್ರದೇಶದ ಗರ್ಭೀಣಿ ಮಹಿಳೆಯರಿಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು ಹೇಳಿದರು.

ತಾಲ್ಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಕಾಲೋನಿಯಲ್ಲಿ ಬದುಕು ಸೇವಾ ಟ್ರಸ್ಟ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭೀಣಿ ಮಹಿಳೆಯರಿಗೆ (ಬುಡಕಟ್ಟು) ಸೀಮಂತ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ಜನರು ಹೆಚ್ಚಿನ ರೀತಿಯಲ್ಲಿ ರಸಾಯನಿಕ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದು, ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.

ಆರೋಗ್ಯ ಪೂರ್ಣ ಜೀವನ ಶೈಲಿಯಲ್ಲಿ ಪೋಷಕಾಂಶಗಳು ಅತ್ಯಗತ್ಯ. ಅದರಲ್ಲೂ ಮಕ್ಕಳ ಬೆಳವಣಿಗೆಗೆ ಇದರ ಪಾತ್ರ ಮುಖ್ಯ. ಆದರೆ ಜಂಕ್‍ಫುಡ್‍ಗಳ ಮೋಹ, ಗಡಿಬಿಡಿಯ ಜೀವನ ಶೈಲಿಯಿಂದಾಗಿ ಮಕ್ಕಳು ನೈಸರ್ಗಿಕವಾಗಿ ಸಿಗುವ ಹಣ್ಣು, ತರಕಾರಿಗಳ ಮೂಲಕ ಪೋಷಕಾಂಶಗಳಗಳನ್ನು ಸೇವಿಸಲು ಆಸಕ್ತಿ ತೋರಿಸುತ್ತಿಲ್ಲ. ಇದರ ಪರಿಣಾಮ ಭಾರತದಲ್ಲಿ ಪೌಷ್ಟಿಕ ಕೊರತೆಯ ಮಟ್ಟ ಹೆಚ್ಚುತ್ತಿದೆ. ಬಡತನದಿಂದ ಉಂಟಾಗುವ ಪೌಷ್ಟಿಕ ಆಹಾರ ಕೊರತೆ ಒಂದಡೆಯಾದರೆ ಸೇವನೆಗೆ ನಿರಾಸಕ್ತಿಯಿಂದ ಉಂಟಾಗುತ್ತಿರುವ ಪೌಷ್ಟಿಕ ಆಹಾರ ಕೊರತೆಯ ಪ್ರಮಾಣವೂ ಏರುತ್ತಿದೆ ಎಂದು ತಿಳಿಸಿದರು.

ಬದುಕು ಸೇವಾ ಟ್ರಸ್ಟ್ ಅಧ್ಯಕ್ಷರಾದ ನಟರಾಜು ಮಾತನಾಡಿ, ಕಾಡಂಚಿನ ಗ್ರಾಮಗಳ ಗರ್ಭೀಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವರಿಗೆ ಪೌಷ್ಠಿಕತೆ ಬಗ್ಗೆ ತಿಳಿಸುವುದು ಅವಶ್ಯಕವಾಗಿದೆ. ಇದಕ್ಕೆ ಇಲಾಖೆಯೂ ನಮಗೆ ಹೆಚ್ಚಿನ ಸಹಕಾರ ನೀಡಬೇಕು. ಇದರಿಂದ ಮಾತ್ರ ಅಪೌಷ್ಠಿಕತೆ ತಡೆ ಸಾಧ್ಯ ಎಂದರು.

ಪೋಷಕಾಂಶ ಒಳಗೊಂಡ ಆಹಾರ ಸೇವನೆಗೆ ಮಕ್ಕಳು ಆಸಕ್ತಿ ತೋರಿಸುವಂತೆ ಪೋಷಕರು ಪ್ರೇರಣೆ ನೀಡಬೇಕು. ಪೋಷಕಾಂಶ ಕೊರತೆ ಮಗುವಿನ ಬೆಳವಣಿಗೆ ಮೇಲೆ ಮಾರಕ ಪರಿಣಾಮ ಬೀಳುತ್ತದೆ. ಜೀರ್ಣ ಸಂಬಂಧಿ ಸಮಸ್ಯೆ, ಪದೇಪದೆ ಸೋಂಕು, ಕ್ಯಾಲ್ಷಿಯಂ, ಕಬ್ಬಿಣಂಶ ಸೇರಿದಂತೆ ಇತರೇ ವಿಟಮಿನ್ ಕೊರತೆಗಳಿಂದ ಉಂಟಾಗುವ ಕಾಯಿಲೆಗಳು ಕಂಡು ಬರುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬದುಕು ಸೇವಾ ಟ್ರಸ್ಟ್ ಸದಸ್ಯರಾದ ಸುಮ, ಶಿವಶಂಕರ್, ಭರತ್, ಮೂರ್ತಿ, ಜ್ಯೋತಿ, ಸಾಂತ್ವನ ಕೇಂದ್ರದ ಮಹೇಶ್, ರಾಷ್ಟ್ರೀಯ ಪೋಷಣ್ ಅಭಿಯಾನ ತಾಲ್ಲೂಕು ಸಂಯೋಜಕರಾದ ಸಂತೋಷ್, ಅಂಗನವಾಡಿ ಕಾರ್ಯಕರ್ತೆಯರಾದ ಸೌಮ್ಯ, ಗಂಗಮ್ಮ ಸೇರಿದಂತೆ ಗ್ರಾಮದ ಮಹಿಳೆಯರು, ಮಕ್ಕಳು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin