ಚಾಮರಾಜನಗರ: ಪ್ರತಿಯೊಬ್ಬರು ಸ್ಥಳೀಯ ಪ್ರದೇಶದ ಇತಿಹಾಸದ ಕುರಿತು ಚಾರಿತ್ರಿಕ ದಾಖಲೆಯ ಮಹತ್ವ ತಿಳಿದುಕೊಂಡಿರಬೇಕು ಎಂದು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕರಾದ ಡಾ. ಗವಿಸಿದ್ದಯ್ಯ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗೂ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗಲ್ಲಿ ನಡೆದ “ಚಾರಿತ್ರಿಕ ದಾಖಲೆಗಳಲ್ಲಿ ಚಾಮರಾಜನಗರ ಜಿಲ್ಲೆಯ ಇತಿಹಾಸ” ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಪತ್ರಗಾರವು ಸ್ಥಳೀಯ ಇತಿಹಾಸದ ಅಧಿಕೃತ ದಾಖಲೆಗಳನ್ನು ಸಂರಕ್ಷಿಸುತ್ತಾ ಬಂದಿದೆ. ತಮ್ಮ ಸ್ಥಳೀಯ ಪ್ರದೇಶದ ಹಿನ್ನಲೆಯನ್ನು ತಿಳಿದು ಕೊಳ್ಳವುದು ಅತ್ಯಗತ್ಯವಾಗಿದೆ. ಇಂದಿನ ತಂತ್ರಜ್ಞಾನದಿಂದ ಮಾಹಿತಿಗಳನ್ನು ಇಲಾಖೆ ವೆಬ್‌ಸೈಟ್‌ಗಳಲ್ಲಿಯೂ ಸಹ ಅಪ್ಲೋಡ್ ಮಾಡಲಾಗಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಚಾಮರಾಜನಗರವು ಇತಿಹಾಸವುಳ್ಳ ಪ್ರದೇಶವಾಗಿದ್ದು ಹಲವಾರು ಕಡತಗಳು ಯಳಂದೂರು ಕಚೇರಿಯಲ್ಲಿ ಸಿಕ್ಕಿದ್ದು ಅವು ಮೋಡಿ ಲಿಪಿಯಲ್ಲಿವೆ. ಮೋಡಿಲಿಪಿಯನ್ನು ಓದುವವರ ಸಂಖ್ಯೆ ವಿರಳವಾಗಿದ್ದು ಭಾಷೆ ಕೊರತೆಯಿಂದ ಕೆಲವು ಕಡತಗಳ ಅನ್ವೇಷಣೆ ಆಗದೇ ಉಳಿದುಕೊಂಡಿವೆ. ಇದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾಗಿದೆ. ಹಾಗಾಗಿ ಇತಿಹಾಸ ಸಂಶೋಧನೆ ಮಾಡುವ ವಿದ್ಯಾರ್ಥಿಗಳು ಇಂತಹ ವಿಷಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಡಾ. ಗವಿಸಿದ್ದಯ್ಯ ಅವರು ಸಲಹೆ ಮಾಡಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ಸುಮತಿ ಅವರು ಮಾತನಾಡಿ ಜಿಲ್ಲೆಯ ಇತಿಹಾಸ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿರುವುದು ಇದೇ ಪ್ರಥಮವಾಗಿದ್ದು ತುಂಬ ವಿಶೇಷವಾಗಿದೆ. ಜಿಲ್ಲೆಯ ಜನತೆ ಇಲ್ಲಿನ ನೆಲ, ಜಲ, ಇತಿಹಾಸವನ್ನು ತಿಳಿದು ಕೊಳ್ಳುವುದು ಕರ್ತವ್ಯವೆಂದೇ ಭಾವಿಸಬೇಕು ಎಂದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಆರ್. ಜಯಣ್ಣ ಮಾತನಾಡಿ ಇತಿಹಾಸದ ದಾಖಲೆಗಳನ್ನು ಸಂರಕ್ಷಿಸುವುದು ಪ್ರಮುಖವಾಗಿದೆ. ಇತಿಹಾಸದ ದಾಖಲೆಗಳಿಂದಲೇ ನಮ್ಮ ದೇಶದ ನಾಗರಿಕತೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಯಬಹುದು. ನಮ್ಮ ಜಿಲ್ಲೆಯ ಇತಿಹಾಸದಿಂದ ಜಿಲ್ಲೆ ಬೆಳೆದು ಬಂದ ದಾರಿ ತಿಳಿದುಕೊಳ್ಳಬಹುದು ಎಂದರು.
ಮೈಸೂರಿನ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬೇಬಿ ಬಿ. ಪ್ರೇಮಲತಾ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆಯು ಭೌಗೋಳಿಕವಾಗಿ ಪೂರ್ವ ಘಟ್ಟದ ತುದಿಯಲ್ಲಿದ್ದು ಸುಮಾರು ೫೧೦೦ ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಮೊದಲು ಅರಿಕುಠಾರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಚಾಮರಾಜನಗರ ಚಾಮರಾಜೇಂದ್ರ ಒಡೆಯರ ಜನ್ಮ ಸ್ಮರಣಾರ್ಥವಾಗಿ ಚಾಮರಾಜನಗರ ಎಂದು ಬದಲಾಯಿತು. ಇಂತಹ ಎಷ್ಟೋ ಸಂಗತಿಗಳು ಇತಿಹಾಸದಲ್ಲಿದ್ದು, ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಪ್ರೊ. ಕೆ.ಸಿ. ವೀರಭದ್ರಯ್ಯ, ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕರಾದ ನಾಗೇಂದ್ರ ಪ್ರಸಾದ್, ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಸಾಹಿತಿಗಳಾದ ಮಹದೇವ ಶಂಕನಪುರ ಇನ್ನಿತರರು ಉಪಸ್ಥಿತರಿದ್ದರು.