ಪ್ರಯಾಣಿಕರು ಅಂಕೀಯ (ಡಿಜಿಟಲ್) ಪದ್ಧತಿಯ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಮೈಸೂರು ವಿಭಾಗದ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಮೊದಲು ಟಿಕೆಟ್‌ಗಳನ್ನು ಖರೀದಿಸಲು ATVM ಗಳಲ್ಲಿ ‘ಸ್ಮಾರ್ಟ್ ಕಾರ್ಡ್’ ಪಾವತಿ ಆಯ್ಕೆಯನ್ನು ಮಾತ್ರ ಒದಗಿಸಲಾಗಿತ್ತು. ಈಗ, ನೈಋತ್ಯ ರೈಲ್ವೆಯ ಹಲವು ನಿಲ್ದಾಣಗಳಲ್ಲಿನ ATVM ಗಳಲ್ಲಿ ‘Paytm’, ‘ಫ್ರೀಚಾರ್ಜ್’ ಮತ್ತು UPI-QR ಕೋಡ್ ಆಧಾರಿತ ಪಾವತಿ ಸೌಲಭ್ಯದ ಅಳವಡಿಕೆ ಸಹ 10.02.2022 ರಿಂದ ಜಾರಿಗೆ ಬರುವಂತೆ ಪ್ರಾರಂಭಿಸಲಾಗಿದೆ. ಈಗ ಪ್ರಯಾಣಿಕರು ATVM ಗಳಲ್ಲಿ ಒದಗಿಸಲಾದ ಈ ಹೊಸ ಪಾವತಿ ಆಯ್ಕೆಯನ್ನು ಬಳಸಿಕೊಂಡು ಕಾಯ್ದಿರಿಸದ ಪ್ರಯಾಣದ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು, ಸೀಸನ್ (ಮಾಸಿಕ) ಟಿಕೆಟ್‌ಗಳನ್ನು ನವೀಕರಿಸಬಹುದು ಮತ್ತು ATVM ಸ್ಮಾರ್ಟ್ ಕಾರ್ಡ್‌ಗಳನ್ನು ಸಹ ರೀಚಾರ್ಜ್ ಮಾಡಿಕೊಳ್ಳಬಹುದು.

ಈ Paytm ಮತ್ತು UPI-QR ಕೋಡ್ ಆಧಾರಿತ ಪಾವತಿ ಸೌಲಭ್ಯದ ಅನುಷ್ಠಾನದೊಂದಿಗೆ, ಮೊಬೈಲ್ UPI ಅಪ್ಲಿಕೇಶನ್ ಇರುವ ಫೋನ್ ಹೊಂದಿರುವ ಯಾವುದೇ ಪ್ರಯಾಣಿಕರು ATVM ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಇದು ಬುಕ್ಕಿಂಗ್ ಕೌಂಟರ್‌ಗಳಲ್ಲಿ ಸರದಿಯಲ್ಲಿ ನಿಲ್ಲದೆ ಸುಲಭವಾಗಿ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ.

ATVM ಗಳಲ್ಲಿ ಅಳವಡಿಸಲಾಗಿರುವ ಈ ಹೊಸ ಸೌಲಭ್ಯದ ಕುರಿತು ಮಾತನಾಡಿದ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ಮೈಸೂರು ವಿಭಾಗದ 10 ನಿಲ್ದಾಣಗಳಾದ ಮೈಸೂರು, ಹಾಸನ, ಶಿವಮೊಗ್ಗ ಟೌನ್, ದಾವಣಗೆರೆ, ಹಾವೇರಿ, ಅರಸೀಕೆರೆ, ಭದ್ರಾವತಿ, ಪಾಂಡವಪುರ, ಕಡೂರು ಮತ್ತು ಹರಿಹರ ನಿಲ್ದಾಣಗಳಲ್ಲಿ ATVM ಗಳನ್ನು ಅಳವಡಿಸಲಾಗಿದ್ದೂ, ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮತ್ತು ಟಿಕೆಟ್ ಖರೀದಿಸಲು ದೀರ್ಘ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವಂತೆ ವಿನಂತಿಸಿದ್ದಾರೆ.