ಚಾಮರಾಜನಗರ: ಸಾರ್ವಜನಿಕರ ಕುಂದುಕೊರತೆ ಆಲಿಸಿ, ಪರಿಹರಿಸುವ ಜಿಲ್ಲಾಧಿಕಾರಿನಡೆ ಹಳ್ಳಿಗಳ ಕಡೆಗೆ ಅಂಗವಾಗಿ ಶನಿವಾರ ತಾಲೂಕಿನ ಯರಗನಹಳ್ಳಿ ಗ್ರಾಮದ ಸರಕಾರಿ ಪ್ರೌಡಶಾಲಾವರಣದಲ್ಲಿ ತಹಸೀಲ್ದಾರ್ ಬಸವರಾಜು ಅಧ್ಯಕ್ಷತೆಯಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಿತು.
ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸರಕಾರದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕು ಸೇರಿದಂತೆ ಅವು ಸಾರ್ವಜನಿಕರ ಮನೆಬಾಗಿಲಿಗೆ ತಲುಪಬೇಕು ಎಂಬುದು ಸರಕಾರದ ಉದ್ದೇಶ, ಆ ನಿಟ್ಟಿನಲ್ಲಿ ಸರಕಾರ ಜಿಲ್ಲಾಡಳಿತನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೊಳ್ಳಬೇಕು ಎಂದರು.
ಈಗಾಗಲೇ ತಾಲೂಕಿನ ಹಲವೆಡೆ ಉತ್ತಮಮಳೆಯಾಗಿದ್ದು, ಬಿತ್ತನೆಯಾಗಿರುವ ಬೆಳೆಗಳಿಗೆ ರಸಗೊಬ್ಬರ ಪೂರೈಕೆಯಾಗುವಂತೆ ಗಮನಹರಿಸಬೇಕು, ಸ್ಥಳೀಯವಾಗಿ ನಿವಾರಣೆ ಮಾಡಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಎಂದು ತಾಕೀತು ಮಾಡಿದರು.
ಮುಂದಿನ ೧೫ ದಿನದೊಳಗೆ ಕ್ಷೇತ್ರವ್ಯಾಪ್ತಿಯ ಅರಕಲವಾಡಿ ಗ್ರಾಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಜನಸಂಪರ್ಕ ಸಭೆ ಆಯೋಜಿಸಲಾಗುವುದು, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಸವರಾಜು ಮಾತನಾಡಿ, ಜನಸಾಮಾನ್ಯರು ತಮ್ಮ ಕೆಲಸಕಾರ್ಯ ಬಿಟ್ಟು, ಸರಕಾರಿಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರಕಾರ ಪ್ರತಿತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮ ಆರಂಭಿಸಿದೆ. ತಾಲೂಕುಮಟ್ಟದ ಕಂದಾಯ, ಕೃಷಿ, ತೋಟಗಾರಿಕೆ, ಅರಣ್ಯ, ಶಿಕ್ಷಣಇಲಾಖೆಅಧಿಕಾರಿಗಳು ಭಾಗವಹಿಸಿದ್ದು, ಅವರಬಳಿ ನಿಮ್ಮ ಅಹವಾಲು ಸಲ್ಲಿಸಬೇಕು, ಸಮಸ್ಯೆ ಸ್ಥಳೀಯವಾಗಿ ಆಗುವುದಿದ್ದರೆ ಸ್ಥಳದಲ್ಲೇ ಬಗೆಹರಿಸಿಕೊಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕಭದ್ರತಾ ಯೋಜನೆಯ ಪಿಂಚಣಿ ಆದೇಶಪತ್ರವನ್ನು ಫಲಾನುಭವಿಯೊಬ್ಬರಿಗೆ ಶಾಸಕರು ವಿತರಿಸಿದರು.
ಕಾರ್ಯಕ್ರಮದಲ್ಲಿ ಯರಗನಹಳ್ಳಿ ಗ್ರಾಮಸೇರಿದಂತೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮದ ಜನರು ವೃದ್ದಾಪ್ಯವೇತನವಿತರಣೆ ಸಮಸ್ಯೆ ನಿವಾರಣೆ, ಗ್ರಾಮಕ್ಕೆ ಹೆಚ್ಚುವರಿಬಸ್ ಸೌಕರ್ಯ ಒದಗಿಸಬೇಕು, ಖಾತೆಬದಲಾವಣೆ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ದಿಗೆ ಕ್ರಮವಹಿಸಬೇಕು ಎಂಬ ನಾನಾ
ಸಮಸ್ಯೆಗಳ ಕುರಿತ ಅರ್ಜಿಗಳನ್ನು ಗ್ರಾಮಸ್ಥರು ಕಂದಾಯಸೇರಿದಂತೆ ನಾನಾಇಲಾಖಾಧಿಕಾರಿಗಳಿಗೆ ಸಲ್ಲಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಮಹೇಶ್ವರಿ, ಸದಸ್ಯರಾದ ಮಹದೇವಸ್ವಾಮಿ, ಪ್ರಭುಸ್ವಾಮಿ, ಪಿ. ಸಾಗರ್, ಬಸವಣ್ಣ, ಪಿಡಿಒ, ಗ್ರಾಮಲೆಕ್ಕಿಗ, ರಾಜಸ್ವನಿರೀಕ್ಷಕರು, ತಾಲೂಕುಮಟ್ಟದ ನಾನಾಇಲಾಖಾಧಿಕಾರಿಗಳು, ಗ್ರಾಮಸ್ಥರು, ಗ್ರಾಮದ ಮುಖಂಡರು ಹಾಜರಿದ್ದರು.