-ಮಾದೇಶ, ಮಾದಲವಾಡಿ, ಚಾಮರಾಜನಗರ.
‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆಯಂತೆ ಈ ಕೊರೊನ ಮಾನವ ಸೃಷ್ಟಿಯೋ ಅಥವಾ ದೇವರ ಸೃಷ್ಟಿಯೋ ತಿಳಿಯದು, ಆದರೇ ಇಂದು ಸೃಷ್ಟಿಯಾಗಿರುವ ಸಮಸ್ಯೆಗಳು ಮಾನವನು ಮಾಡಿಕೊಂಡಿರುವ ಒಂದು ಕೆಟ್ಟ ವ್ಯವಸ್ಥೆಯ ಪರಿಣಾಮವೆಂದರೇ ತಪ್ಪಾಗಲಾರದು.
ಬಡವನಿಗೆ ಅನ್ನದ ಚಿಂತೆ, ಶ್ರೀಮಂತನಿಗೆ ಕಾಲಹರಣದ ಚಿಂತೆ,ರಾಜಕಾರಣಿಗಳಿಗೆ ಅಧಿಕಾರದ ಚಿಂತೆ, ಜನ ಸಾಮಾನ್ಯರಿಗೆ ಬದುಕಿನ ಚಿಂತೆ, ಈ ಚಿಂತೆಗಳ ಸಂತೆಯಲ್ಲಿ ಸಮಸ್ಯೆಗಳು ಕಂತೆ ಕಂತೆ. ರೈತರು, ಅಸಂಘಟಿತ ಕಾರ್ಮಿಕರು,ವಾಹನ ಚಾಲಕರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು, ಸಮಾಜದಲ್ಲಿ ತಮ್ಮ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಅನೇಕ ಸಮುದಾಯಗಳು ಮತ್ತು ನಿರುದ್ಯೋಗಿಗಳು ಕೊರೊನ ರೋಗದ ಜೋತೆ ಹೋರಾಟ ಮಾಡುವುದರೊಂದಿಗೆ ಬದುಕಿನ ಜೋತೆಯೂ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಇವರ ಸಮಸ್ಯೆಗಳಿಗೆ ಸ್ಪಂದಿಸಿ ಧೈರ್ಯ ತುಂಬಬೇಕಾದ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಒಬ್ಬರನ್ನೊಬ್ಬರು ಟೀಕಿಸುತ್ತಾ ಆಟವಾಡುತ್ತಿರುವುದು ಒಂದು ದೊಡ್ಡ ಸಮಸ್ಯೆಯೇ ಆಗಿದೆ.
ಇವರು ಉಚಿತವಾಗಿ ಅಕ್ಕಿಯನ್ನು ಕೊಡುವೆವು ಆದರೆ ಉದ್ಯೋಗ ಕೊಡೆವು, ರೈತರ ಸಾಲ ಮನ್ನಾ ಮಾಡುವೆವು ಆದರೆ ರೈತರಿಗೆ ಬೇಕಾದ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ,ಔಷಧ, ಕೃಷಿ ಯಂತ್ರಗಳನ್ನು ಕಡಿಮೆ ಬೆಲೆಗೆ ಕೊಡೆವು, ಖಾಸಗಿ ಶಾಲೆ, ಕಾಲೇಜ್ ಕೊಡುವೆವು ಆದರೇ ಖಾಸಗಿ ಶಿಕ್ಷಕರಿಗೆ ಸೌಲಭ್ಯ ಕೊಡೆವು,ವಿದ್ಯಾವಂತ ನಿರುದ್ಯೋಗಿ ಕಾರ್ಮಿಕರನ್ನು ಸೃಷ್ಟಿಸುವ ವಿಶ್ವವಿದ್ಯಾಲಯಗಳನ್ನು ಆದರೆ ಅವರಿಗೆ ಉದ್ಯೋಗ ಕೊಡೆವು, ಎಂಬಂತೆ ನಿಮ್ಮ ಅವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸುತ್ತ,ಸುಳ್ಳು ಭರವಸೆಗಳನ್ನು ನೀಡುತ್ತ ನೂರಾರು ಸಮಸ್ಯೆಗಳಿಗೆ ಕಾರಣರಾಗಿದ್ದೀರಿ,ಈ ಸಮಸ್ಯೆಗಳಿಗೆ ನೀವೆ ಪರಿಹಾರ ನೀಡುವಿರಾ ಇಲ್ಲ ದೇವರು ಬಂದು ಪರಿಹಾರ ನೀಡುತ್ತಾನೆ ಎಂದು ಮೂರ್ಖರಂತೆ ಕಾಯಬೇಕೆ?. ಇನ್ನಾದರು ಜನಪ್ರಿಯ ಕಾರ್ಯಕ್ರಮಗಳನ್ನು ಬಿಟ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸಿ.