ಮೈಸೂರು, ನವೆಂಬರ್- ಸಾರ್ವಜನಿಕರನ್ನು ಹೆದರಿಸಿ-ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆ ಕೋರರನ್ನು ಬಂಧಿಸುವಲ್ಲಿ ಉದಯಗಿರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನವೆಂಬರ್ 13 ರಂದು ಶಕ್ತಿನಗರದಲ್ಲಿ ಶ್ರೀರಾಗ್ ಎಂಬುವರು ಹೂ ಬಿಡಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ, ಬೆದರಿಸಿ, ಹಲ್ಲೆ ಮಾಡಿ, ಮೋಟೊ ಜಿ4 ಪ್ಲಸ್ ಮೊಬೈಲ್ ಫೋನ್‍ನ್ನು ಬಲವಂತವಾಗಿ ಕಿತ್ತಿಕೊಂಡು ಹೋಗಿರುತ್ತಾರೆ. ಮತ್ತದೇ ದಿನ ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಕಲ್ಯಾಣಗಿರಿ ನಗರದಲ್ಲಿ ಮೊಹಮ್ಮದ್ ಜವಾದ್ ಎಂಬುವರು ಮನೆಯಲ್ಲಿದ್ದಾಗ ಒಬ್ಬ ವ್ಯಕ್ತಿ ಬಂದು ತನಗೆ 10,000/- ರೂಪಾಯಿ ಹಣ ಕೊಡು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಚಾಕು ತೋರಿಸಿ ಬೆದರಿಸಿದ್ದು, ಹಣ ಕೊಡಲು ನಿರಾಕರಿಸಿದಾಗ ಮನೆಯಲ್ಲಿದ್ದ ಲೆನೆವೊ ಕಂಪನಿ ಲ್ಯಾಪ್‍ಟಾಪ್‍ನ್ನು ತೆಗೆದುಕೊಂಡು ಹೋಗಿರುತ್ತಾನೆ.
ಈ ಕೃತ್ಯಗಳ ಸಂಬಂಧ ಉದಯಗಿರಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಕೈಗೊಂಡ ಉದಯಗಿರಿ ಪೊಲೀಸರು ನವೆಂಬರ್ 17 ರಂದು ರಾಜೀವನಗರ ಮಾದೇಗೌಡ ವೃತ್ತದ ಬಳಿ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆಸಾಮಿಗಳಾದ ನಗರದ ಕಲ್ಯಾಣಗಿರಿ, ಯಾರಬ್ ಮಸೀದಿ ಹತ್ತಿರದ ನಿವಾಸಿ ಮೊಹಮ್ಮದ್ ಜಮೀರ್ ಉರ್ ರಹಮಾನ್ @ ಜಮೀರ್ ಬಿನ್ ಮೊಹಮ್ಮದ್ ಜಕಾವುರ್ ರೆಹಮಾನ್, (20 ವರ್ಷ) ಮತ್ತು ರಾಘವೇಂದ್ರ ಬಡಾವಣೆ, ಈದ್ಗಾ ಮೈದಾನದ ಹತ್ತಿರದ ನಿವಾಸಿ ಶೊಹೇಬ್ ಅಕ್ತರ್ @ ಶೊಹೇಬ್ ಬಿನ್ ಅಲ್ಲಾ ಭಕ್ಷ್, (21 ವರ್ಷ) ಎಂಬುವರುಗಳನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ, ಇವರು ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರ ವಶದಲ್ಲಿದ್ದ ರೂ.45,000/- ಮೌಲ್ಯದ 01-ಮೋಟೊ ಕಂಪನಿಯ ಮೊಬೈಲ್ ಫೋನ್, 01-ಲ್ಯಾಪ್‍ಟಾಪ್, ಕೃತ್ಯಕ್ಕೆ ಬಳಿಸಿದ್ದ ಚಾಕು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ರವರಾದ ಗೀತಪ್ರಸನ್ನ ರವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ರವರಾದ ಎಂ.ಎನ್ ಶಶಿಧರ್ ರವರ ನೇತ್ರತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಪೂಣಚ್ಚ ಎನ್.ಎಂ, ಪಿ.ಎಸ್.ಐ. ಎಂ.ಜೈಕೀರ್ತಿ, ನಟರಾಜ್, ಎ.ಎಸ್.ಐ. ದಿವಾಕರ್ ಹಾಗೂ ಸಿಬ್ಬಂದಿಗಳಾದ ಎಂ.ಶಂಕರ್, ಸಿದ್ದಿಕ್ ಅಹಮದ್, ಮೋಹನ್‍ಕುಮಾರ್, ಕೃಷ್ಣ. ಆರ್.ಎಸ್. ಶಿವರಾಜಪ್ಪ, ಮಾಲತಿ ರವರುಗಳು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ, ಐಪಿಎಸ್ ರವರು ಪ್ರಶಂಸಿಸಿರುತ್ತಾರೆ.

By admin