ಹಾಸನ:ಪ್ರತಿಯೊಬ್ಬರಿಗೂ ಒಂದೊಂದು ವಿಚಾರಕ್ಕೆ ನಮ್ಮ ನಾಯಕರ ಮೇಲೆ ಆಕ್ರೋಶ ವ್ಯಕ್ತವಾಗುವುದು ಸಹಜ ಹಾಗೆಂದು ಅದನ್ನು ವಿಕೃತ ರೀತಿಯಲ್ಲಿ ತೀರಿಸಿಕೊಳ್ಳುವುದು ಮಾತ್ರ ಅಪರಾಧವಾಗಿದೆ. ಇದರ ಅರಿವಿದ್ದರೂ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಕಟೌ ಟ್ ಗೆ ಚಪ್ಪಲಿಯಲ್ಲಿ ಹೊಡೆಯುವ ದೃಶ್ಯವೊಂದು ಬೆಳಕಿಗೆ ಬಂದಿದ್ದು, ಬಿಜೆಪಿ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ದೃಶ್ಯ ಹಾಸನದಲ್ಲಿ ನಡೆದಿದ್ದು ಎನ್ನಲಾಗಿದೆ. ಯುವಕನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟೌ ಟ್ ಗೆ ಚಪ್ಪಲಿಯಿಂದ ಹೊಡೆದಿದ್ದಾನೆ. ಇದನ್ನು ಆತನೇ ವೀಡಿಯೋ ಮಾಡಿದ್ದೋ ಅಥವಾ ಸಾರ್ವಜನಿಕರು ಮಾಡಿದರೋ ಗೊತ್ತಿಲ್ಲ ಆದರೆ ವಿಡಿಯೋ ತುಣುಕು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ನೋಡಿದ ಮೋದಿ ಅಭಿಮಾನಿಗಳು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಆ ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಾಹಿತಿಗಳ ಪ್ರಕಾರ ಕಟೌಟ್ಗೆ ಹೊಡೆಯುತ್ತಿರುವ ವಿಡಿಯೋದಲ್ಲಿರುವ ಯುವಕ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪುರಲೇಹಳ್ಳಿ ಗ್ರಾಮದವನು ಎಂದು ತಿಳಿದು ಬಂದಿದೆ. ಈತ ಮದ್ಯದ ಅಮಲಿನಲ್ಲಿ ಈ ರೀತಿ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಮಾಸ್ಕ್ ಹಾಕಿಲ್ಲ, ಮೇಲಕ್ಕೆ ಹೋಗಲು ತೋರಿಸ್ತೀಯಾ? ಎಂದು ಪ್ರಶ್ನಿಸುತ್ತಾ ಯುವಕ ಮೋದಿ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಸ್ಥಳೀಯ ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಬಾಣಾವರ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.