
ಪುನೀತ್ ರಾಜ್ ಕುಮಾರ್ ಅಗಲಿ ಮೂರು ತಿಂಗಳು ಗತಿಸಿದರೂ, ಅವರ ಕುಟುಂಬಕ್ಕೆ ನಟ ನಟಿಯರು ಸಾಂತ್ವಾನ ಹೇಳುತ್ತಲೇ ಇದ್ದಾರೆ. ಪುನೀತ್ ನಿಧನದ ದಿನದಂದು ಮಗುವಿನಂತೆ ಕಣ್ಣೀರಿಟ್ಟಿದ್ದ ನಟ ಅರ್ಜುನ್ ಸರ್ಜಾ, ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.
ಪುನೀತ್ ನಿಧನರಾಗಿ ಮೂರು ತಿಂಗಳು ಆಯ್ತು. ಈ ಹಿಂದೆ ನಾನು ಬಂದು ಹೋಗಿದ್ದೆ. ಆದರೆ ನನ್ನ ಹೆಂಡತಿ ಬಂದಿರಲಿಲ್ಲ. ಅಪ್ಪು ಅವರಿಗೆ ನನ್ನ ಹೆಂಡತಿ ತುಂಬ ಕ್ಲೋಸ್. ಚಿಕ್ಕ ವಯಸ್ಸಿನಿಂದಲೂ ಜೊತೆಯಲ್ಲಿ ಬೆಳೆದವರು. ಹಾಗಾಗಿ ಪತ್ನಿ ಜೊತೆ ಬಂದು ಪುನೀತ್ ಕುಟುಂಬದವರ ಯೋಗಕ್ಷೇಮ ವಿಚಾರಿಸಿದ್ದೇನೆ. ಅಪ್ಪು ಬಗ್ಗೆ ಎಷ್ಟು ಹೇಳಿದರೂ ಅದು ಕಮ್ಮಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಹುಡುಗನನ್ನು ಎಷ್ಟು ನೆನಪಿಸಿಕೊಂಡರೂ ಅದು ಕಮ್ಮಿ ಎನಿಸುತ್ತದೆ. ಅಪ್ಪು ನಿಧನದ ಬಳಿಕ ಬದುಕು ಡಿಪ್ರೆಸ್ ಆಯಿತು. ನಮಗೆ ಹೀಗಾಗಿರುವಾಗ ಅವರ ಕುಟುಂಬಕ್ಕೆ ಎಷ್ಟು ನೋವಾಗಿರುತ್ತದೆ ಎಂಬುದನ್ನು ನಾವು ಊಹಿಸಬಹುದು. ಕಷ್ಟದಲ್ಲಿ ನಾವಿದ್ದೇವೆ ಅಂತ ಹೇಳಬಹುದು. ಇನ್ನೇನೂ ಹೇಳಲು ಸಾಧ್ಯವಿಲ್ಲ?
ಪುಟಾಣಿ ಪುನೀತ್ ಅವರನ್ನು ಎತ್ತಿ ಆಡಿಸಿದ ದಿನಗಳನ್ನು ನೆನಪಿಸಿಕೊಂಡ ಅರ್ಜುನ್ ಸರ್ಜಾ, ಇಂತಹ ಮಹಾನ್ ಕಲಾವಿದನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅವರು ಎಲ್ಲಿಯೂ ಹೋಗಿಲ್ಲ, ನಮ್ಮೊಂದಿಗೆ ಸದಾ ಇರುತ್ತಾರೆ ಎಂದರು.
ಈ ಹಿಂದೆ ಪುನೀತ್ ಅವರನ್ನು ಎತ್ತಿಕೊಂಡಿದ್ದ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಶಾಂತಿ ಕೋರಿದ್ದರು ಅರ್ಜುನ್ ಸರ್ಜಾ. ಪುನೀತ್ ಅವರನ್ನು ಬಾಲ್ಯದಲ್ಲಿ ಹಾಗೆ ಎತ್ತಿಕೊಳ್ಳುವ ಭಾಗ್ಯ ಹಲವು ಬಾರಿ ಸಿಕ್ಕಿದೆ ಎಂದು ನೆನಪಿಸಿಕೊಂಡಿದ್ದರು.