ಮೈಸೂರು: ಒಂದೇ ಗ್ರಾಮದ ಮೂವತ್ತೈದು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿರುವ ಕಾರಣ ಜಿಲ್ಲೆಯ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಹಾಗೆನೋಡಿದರೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಜತೆಗೆ ಸಾವಿನ ಸಂಖ್ಯೆಯೂ ನಿಲ್ಲುತ್ತಿಲ್ಲ. ಈಗ ರಾಜ್ಯದಲ್ಲಿ ಮೈಸೂರು ಶೇ.10ಕ್ಕಿಂತ ಹೆಚ್ಚು ಕೊರೊನಾ ಸೋಂಕು ಹೊಂದಿರುವ ಏಕೈಕ ಜಿಲ್ಲೆ ಎಂಬ ಅಪಖ್ಯಾತಿ ಪಡೆದಿದ್ದು ಪರಿಣಾಮ ಲಾಕ್ ಡೌನ್ ಯಥಾಸ್ಥಿತಿ ಮುಂದುವರೆದಿದೆ.

ನಗರ ಪ್ರದೇಶಕ್ಕಿಂತಲೂ ಹೆಚ್ಚು ಗ್ರಾಮೀಣಪ್ರದೇಶಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಜನ ಭಯಪಡುವಂತಾಗಿದೆ. ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿ ಸೋಂಕಿನ ಭಯ ಹೆಚ್ಚಾಗಿದ್ದು, ಇಲ್ಲಿನ ಹುಲ್ಲಹಳಿ  ಹೋಬಳಿ ಹಾಡ್ಯ ಗ್ರಾಮ ಪಂಚಾಯಿತಿಗೆ ಸೇರಿದ ಅರಿಯೂರು ಗ್ರಾಮದಲ್ಲಿ ಒಂದೇ ದಿನ ಮೂವತ್ತೈದು ಕೊರೊನಾ ಸೋಂಕು ದೃಢಪಟ್ಟಿರುವುದು ಸುತ್ತಮುತ್ತಲಿನ ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ.

ಸದ್ಯ ಅರಿಯೂರು ಗ್ರಾಮವನ್ನು ಹತ್ತು ದಿನಗಳ ಕಾಲ  ಸಿಲ್  ಡೌನ್  ಮಾಡಲಾಗಿದ್ದು  ಆ ಗ್ರಾಮಕ್ಕೆ ಹೊರಗಡೆಯಿಂದ  ಯಾರು ಹೋಗಬಾರದು ಮತ್ತು ಗ್ರಾಮದಿಂದ ಹೊರಗಡೆಗೆ ಯಾರೂ ಬರಬಾರದು ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಇಷ್ಟಕ್ಕೂ ಈ ಅರಿಯೂರು ಗ್ರಾಮದಲ್ಲಿ ಇಷ್ಟೊಂದು ಸೋಂಕು ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ನೋಡುವುದಾದರೆ ಇಲ್ಲಿನ ಜನ ಕೆಲಸ ಹುಡುಕಿಕೊಂಡು ಬೆಂಗಳೂರು ಮತ್ತು ರಾಮನಗರದ ಕಡೆಗೆ ಹೋಗಿದ್ದರು. ಲಾಕ್ ಡೌನ್ ಹಿನ್ನಲೆಯಲ್ಲಿ ಮತ್ತೆ ತಮ್ಮ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ಅವರನ್ನು ತಪಾಸಣೆಗೊಳಪಡಿಸಿದಾಗ ಅವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಈಗ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

By admin