ಮೈಸೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಖಾಸಗಿ ದೇಗುಲಗಳಲ್ಲಿ ಅರ್ಚಕ ವೃತ್ತಿ ಮಾಡುತ್ತಿರುವವರಿಗೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿರುವುದರಿಂದ ಅವರ ರಕ್ಷಣೆ ವಿಪ್ರ ಸಂಘ ಸಂಸ್ಥೆಗಳ ಮತ್ತು ಮುಖಂಡರ ಆದ್ಯ ಕರ್ತವ್ಯವಾಗಿದೆ ಎಂದು ಧಾರ್ಮಿಕ ಚಿಂತಕ ಡಾ. ಭಾನುಪ್ರಕಾಶ್ ಶರ್ಮಾ ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ, ಖಿಲ್ಲೆ ಮೊಹಲ್ಲಾದಲ್ಲಿರುವ ಶಂಕರಮಠ, ಒಂಟಿ ಕೊಪ್ಪಲ್ ಮಾತೃಮಂಡಳಿ ವೃತ್ತ ದಲ್ಲಿರುವ ಓಂಕಾರೇಶ್ವರ ದೇವಸ್ಥಾನ  ಸೇರಿದಂತೆ ಮೈಸೂರಿನ ಖಾಸಗಿ ದೇವಸ್ಥಾನದ ಅರ್ಚಕರು ಹಾಗೂ ಪುರೋಹಿತರಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ   ಆಹಾರ ಕಿಟ್ ಮತ್ತು  ಗುರುದಕ್ಷಿಣೆ ನೀಡಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ‌ 7ಲಕ್ಷಕ್ಕೂ ಹೆಚ್ಚು ಬಡ ಬ್ರಾಹ್ಮಣರ‌ ಕುಟುಂಬಗಳು  ಆರ್ಥಿಕ ಸಂಕಷ್ಟದಲ್ಲಿದ್ದು, ಅವರೆಲ್ಲರೂ ಕೊರೋನಾ ಸೊಂಕು ನಿಲ್ಲಲಿ ಎಂದು ರಾಜ್ಯದ ಎಲ್ಲ ಮಠ, ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ ಎಂದು ಹೇಳಿದರು. ವಿಪ್ರರು ಸ್ವಾಭಿಮಾನಿಗಳಾಗಿರುವುದರಿಂದ ಸಹಾಯ ಪಡೆಯಲು ಹಿಂಜರಿಯುತ್ತಿದ್ದಾರೆ. ಆದರೆ ಬಡಬ್ರಾಹ್ಮಣರನ್ನು ರಕ್ಷಿಸುವುದು ವಿಪ್ರ ಸಂಘ ಸಂಸ್ಥೆಗಳ ವಿಪ್ರ ಮುಖಂಡರ ಕರ್ತವ್ಯವಾಗಿದ್ದು, ಗ್ರಾಮ ಮಟ್ಟದಲ್ಲಿ ವಿಪ್ರರ ಮನೆಗಳಿಗೆ ದಿನನಿತ್ಯದ ಅಡುಗೆ ದಿನಸಿ ಪದಾರ್ಥಗಳ ಆಹಾರ ಕಿಟ್ ಮತ್ತು ಹಿರಿಯ ನಾಗರಿಕರಿಗೆ ಔಷಧೀಯ ನೆರವಿನ ಮೆಡಿಕಲ್ ಕಿಟ್ ನೀಡಲು ಮುಂದಾಗಬೇಕಿದೆ ಎಂದರು.ಈಗಾಗಲೇ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ದವರು  ವಿವಿಧ ಬ್ರಾಹ್ಮಣ ಸಂಘ ಸಂಸ್ಥೆಗಳಿಗೆ ಸಹಾಯ ನೀಡುತ್ತಾ ಬಂದಿದ್ದು, ಈಗ ಈ ಸಂಘದವರೇ ಬಡ ಬ್ರಾಹ್ಮಣ ರನ್ನು ಗುರುತಿಸಿ ಅವರವರ ಮನೆಗೆ ತೆರಳಿ ಆಹಾರ ಕಿಟ್ ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು

ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ನಿರ್ದೇಶಕ  ಎಂ.ಆರ್. ಬಾಲಕೃಷ್ಣ, ಕಾಮಾಕ್ಷಿ ಆಸ್ಪತ್ರೆಯ ಅಧ್ಯಕ್ಷ ಮಹೇಶ್ ಶೆಣೈ, ಅಮೃತೇಶ್ವರ ದೇವಸ್ಥಾನದ ಮುಖ್ಯ ಅರ್ಚಕ  ಮೈ ಕುಮಾರ್, ಶಂಕರಮಠದ ವ್ಯವಸ್ಥಾಪಕ  ಯೋಗಾನಂದ್, ಕಡಕೊಳ ಜಗದೀಶ್, ವಿಕ್ರಂ ಅಯ್ಯಂಗಾರ್, ಜಯಸಿಂಹ ಶ್ರೀಧರ್, ಸುಚೀಂದ್ರ, ಚಕ್ರಪಾಣಿ, ಜ್ಯೋತಿ ಮೊದಲಾದವರು ಇದ್ದರು.

By admin