ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ‘ಕೊರೊನಾ ಮುಕ್ತ ಗ್ರಾಮ’ ಮಾಡುವ ಗ್ರಾ.ಪಂ.ಗೆ ಶಾಸಕರ ನಿಧಿಯಡಿ 5 ಲಕ್ಷ ರೂ ನೀಡಲಾಗುವುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಪ್ರಕಟಿಸಿದ್ದಾರೆ.
ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕೋವಿಡ್ 19 ಸೋಂಕಿತರಿಗೆ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಕಡಿಮೆಯಾಗುತ್ತಿದೆ, ಜೊತೆಗೆ ಸಾವಿನ ಪ್ರಮಾಣವು ಇಳಿಮುಖವಾಗುತ್ತಿದೆ. ಆದರೆ ಇಷ್ಟಕ್ಕೆ ಸಮಾಧಾನ ಪಡೆದೆ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಲಾಕ್‌ಡೌನ್‌ನ್ನು ಮೇ ಅಂತ್ಯದ ವರೆಗೆ ಮುಂದುವರೆಸುವುದು ಒಳ್ಳೆಯದು ಎಂದು ಎಂ,ಪಿ.ಅಪ್ಪಚ್ಚು ರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲವು ಸುಧಾರಣೆ ಮತ್ತು ಬದಲಾವಣೆ ಮಾಡಲಾಗಿದೆ. ತಜ್ಞ ವೈದ್ಯರು, ಶ್ರುಶ್ರೂಷಕರು, ಇತರೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಹೊರಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಹಲವು ವೈದ್ಯರು ತವರು ಜಿಲ್ಲೆಗೆ ಆಗಮಿಸಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆ ಗೆ ದಾಖಲಾದ ಸೋಂಕಿತರ ಮೊಬೈಲ್ ಮತ್ತು ಹಣ ಕಳೆದಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸಂಬAಧಪಟ್ಟರು ಹೆಚ್ಚಿನ ನಿಗಾ ವಹಿಸಬೇಕಿದೆ.


ಕೋವಿಡ್ 19 ಮಹಾಮಾರಿ ಇಂದಿಗೆ-ನಾಳೆಗೆ ತೊಲಗುವುದಿಲ್ಲ, ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ತಲೆನೋವು ಇತರೆ ತೊಂದರೆ ಉಂಟಾದಲ್ಲಿ ತಕ್ಷಣವೇ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು. ಆದರೆ ಆತಂಕಕ್ಕೆ ತುತ್ತಾಗಬಾರದು ಎಂದರು.
ಪ್ರತಿಯೊಬ್ಬರೂ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಿದಾಗ ಮಾತ್ರ ಕೋವಿಡ್ 19 ದೂರ ಇರಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರ ವಹಿಸುವುದು ಅಗತ್ಯ, ಸೋಂಕಿತರು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ ಔಷಧಿ ಪಡೆಯಬೇಕು ಎಂದು ಅಪ್ಪಚ್ಚು ರಂಜನ್ ಅವರು ಸಲಹೆ ನೀಡಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಪೂರೈಕೆಯಾಗುವ ಆಹಾರ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ ಶಾಸಕರು ಅಲ್ಲಿನ ವ್ಯವಸ್ಥೆಯನ್ನು ಗಮನಿಸಿದರು, ‘ಸಂಬಾರು’ ಸವಿದ ಶಾಸಕರು ಉತ್ತಮ ಗುಣಮಟ್ಟದ ಆಹಾರವನ್ನು ಕಾಲಮಿತಿಯೊಳಗೆ ಬಿಸಿಯಾಗಿ ಒದಗಿಸಬೇಕು. ನಿಯಮಿತವಾಗಿ ಆಹಾರ ಪೂರೈಸಿದ್ದಲ್ಲಿ ಮಾನಸಿಕವಾಗಿ ಸೋಂಕಿತರು ನೆಮ್ಮದಿಯಾಗಿ ಇರಲು ಸಾಧ್ಯ. ಆಹಾರ ತಯಾರಿಸುವಾಗ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಅಡುಗೆ ಮಾಡಬೇಕು. ಸ್ವಚ್ಚತೆ ಕಾಪಾಡಬೇಕು. ಆಹಾರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದಾರೆ.

By admin