ಚಾಮರಾಜನಗರ: ಕಳೆದ ಹದಿನೈದು ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಸೂಚನೆಯಂತೆ ಮುಂದಿನ ವಿಚಾರಣೆಯ ವೇಳೆ ರಾಜ್ಯ ಸರ್ಕಾರ ಕ್ರಮವಹಿಸಿರುವ ಕುರಿತಂತೆ ತನ್ನ ನಿಲುವನ್ನು ತಿಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ, ಕೋವಿಡ್ ಸೋಂಕಿತರ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದ ಬಳಕ ಮಾಧ್ಯಮದವರೊಂದಿಗೆ ಮಾತನಾಡಿ, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿನ ಆಕ್ಸಿಜನ್ ಕೊರತೆಯಿಂದ ಅಮಾಯಕರು ಸಾವನ್ನಪ್ಪಿದ ಘಟನೆ ನಡೆದು ಹದಿನೈದು ದಿನಗಳಾಗಿದೆ, ನ್ಯಾಯಾಂಗ ತನಿಖೆಯೂ ಸಹ ನಡೆದಿದೆ, ಹೈ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಹೈ ಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯ ವೇಳೆಗೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣದ ತಪ್ಪಿತಸ್ಥರಿಗೆ ಕ್ರಮ ಹಾಗೂ ಮೃತ ಕುಟುಂಬಗಳಿಗೆ ಪರಿಹಾರವನ್ನು ನೀಡುವ ಬಗ್ಗೆ ಸರ್ಕಾರದ ನಿರ್ಧಾರವನ್ನು ತಿಳಿಸುವಂತೆ ಸೂಚನೆ ನೀಡಿದೆ, ತಾವು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಮೃತ ಕುಟುಂಬಗಳಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬಹುದೆಂದು ತಿಳಿಸಿದ್ದೇನೆ, ಸದ್ಯದಲ್ಲಿ ಸರ್ಕಾರ ಹೈ ಕೋರ್ಟ್ ಗೆ ತನ್ನ ನಿಲುವನ್ನು ತಿಳಿಸಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಹನೂರು ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರ ಬಳಿಯೂ ಸಹ ಚರ್ಚೆ ನಡೆಸಿದ್ದೇವೆ. ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು ಹಾಗೂ ಸಾವಿನ ಪ್ರಮಾಣವೂ ಸಹ ಕಡಿಮೆಯಾಗಬೇಕು ಇದಕ್ಕೆ ಬೇಕಾಗುವ ಎಲ್ಲ ಕ್ರಮವನ್ನು ವಹಿಸಲು ರಾಜ್ಯ ಸರ್ಕಾರ ಸಿದ್ದವಿದೆ ಎಂದರು.
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಕಡಿಮೆಯಾಗಲಿದ್ದು ಬಳಿಕ ಪರೀಕ್ಷೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು.