ಮೈಸೂರು: ನಂಜನಗೂಡು ನಗರದಲ್ಲಿ ನಾಲೆಗಳ ಮೇಲೆಯೇ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಕಾವೇರಿ ನೀರಾವರಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ನಗರದ ಕಾವೇರಿ ನೀರಾವರಿ ಇಲಾಖೆಗೆ ಸೇರಿದ ನಾಲೆ ಮೇಲೆ ಹಾಕಲಾಗಿದ್ದ ಕವರ್ ಡೆಕ್ ಮೇಲೆಯೇ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟುಗಳನ್ನು ನಡೆಸಲಾಗುತ್ತಿತ್ತು. ಆ ಮೂಲಕ ಬಹಳಷ್ಟು ವರ್ಷಗಳಿಂದ ಇದೊಂದು ಬಗೆಹರಿಯದೆ ಸಮಸ್ಯೆಯಾಗಿ ಉಳಿದಿತ್ತು. ನಾಲೆ ಮೇಲೆಯೇ ಗೋಬಿ ಮಂಚೂರಿ. ಚಿಕನ್ ಅಂಗಡಿಗಳು. ಬೀಡಿ ಅಂಗಡಿ. ಮಿಲಿಟರಿ ಹೋಟೆಲ್ ಗಳು. ತಲೆ ಎತ್ತಿದಲ್ಲದೆ, ಅದರ ಜೊತೆಗೆ ಕಬಾಬ್ ಅಂಗಡಿಗಳು ಇದ್ದುದರಿಂದ ಕುಡುಕರು ಕುಡಿದು ಅಲ್ಲಿಯೇ ಮಲಗುತ್ತಿದ್ದರು. ಜತೆಗೆ ಇಲ್ಲಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಕಿರಿಕ್ ಕೂಡ ನಡೆಯುತ್ತಿತ್ತು.. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಮತ್ತು ನಗರಸಭೆಗೆ ಪತ್ರ ಬರೆದು ಕಟ್ಟಡಗಳನ್ನು ತೆರವು ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ನಗರಸಭೆ ಮತ್ತು ಪೊಲೀಸ್ ಇಲಾಖೆ ಶುಕ್ರವಾರ ಜೆಸಿಬಿಯಿಂದ ಬೆಳ್ಳಂಬೆಳಗ್ಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಈ ವೇಳೆ ನಗರಸಭೆ ಆಯುಕ್ತ ರಾಜಣ್ಣ ಮಾತನಾಡಿ ಅಕ್ರಮ ಕಟ್ಟಡಗಳು ಬಹಳ ವರ್ಷಗಳ ಹಿಂದೆಯೇ ತಲೆ ಎತ್ತಿದ್ದು, ಇವುಗಳಿಂದ ಬಹಳ ತೊಂದರೆ ಯಾಗುತ್ತಿತ್ತು. ಇದನ್ನೆಲ್ಲ ಅರಿತು ತೆರವು ಗೊಳಿಸಲಾಗಿದೆ ಎಂದು ಹೇಳಿದರು. ಕಾರ್ಯಾಚರಣೆ ವೇಳೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿ ಅಶೋಕ್, ನಗರಸಭೆ ಆಯುಕ್ತ ರಾಜಣ್ಣ, ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್, ಪಿ.ಎಸ್ಐ ರವಿಕುಮಾರ್. ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿ ಇದ್ದರು.