ಚಾಮರಾಜನಗರ: ಕೊರೋನಾ ಯಾರು ನಿರೀಕ್ಷೆ ಮಾಡದಂತಹ ಅನಾಹುತ ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ಹಲವು ಹೃದಯ ವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕೆಲವರು ಮಕ್ಕಳನ್ನು ಇನ್ನು ಕೆಲವರು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇದೀಗ ಕೊರೋನಾದಿಂದಾಗಿ ಅಪ್ಪ ಅಮ್ಮನ ಕಳೆದು ಕೊಂಡು ತಬ್ಬಲಿಯಾಗಿದ್ದ ಐದು ವರ್ಷದ ಪುಟ್ಟ ಬಾಲಕಿಯನ್ನು ಚಿಕ್ಕಮ್ಮಳೇ ದತ್ತು ಪಡೆಯುವ ಮೂಲಕ ಆಶ್ರಯ ನೀಡಿದ್ದಾರೆ.


ಜಿಲ್ಲೆಯ ಕೊತ್ತಲವಾಡಿ ಗ್ರಾಮದಲ್ಲಿ ಕೋವಿಡ್‌ನಿಂದ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿ ಮೃತಪಡುವುದರೊಂದಿಗೆ ಅವರ ಐದು ವರ್ಷದ ಪುತ್ರಿ ಅನಾಥವಾಗಿತ್ತು. ಇದೀಗ ರಶ್ಮಿ ಅವರ ಸಹೋದರಿ ರಮ್ಯಾ ಅವರು ಕಾನೂನಿನ ನಿಯಮದಂತೆ ದತ್ತು ಪಡೆದು ಮಗುವಿಗೆ ಅಮ್ಮನ ಸ್ಥಾನ ತುಂಬಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿ ಮೇ 10 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ನಂತರ ಮೃತ ದಂಪತಿಯ ಪುತ್ರಿ ಅಜ್ಜಿಯ ಆರೈಕೆಯಲ್ಲಿದ್ದರು. ಆದರೆ ರಶ್ಮಿ ಮೃತಪಡುವ ಕೆಲ ನಿಮಿಷಗಳ ಮೊದಲು ತಂಗಿ ರಮ್ಯಾಗೆ ತನ್ನ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದರಂತೆ.
ಈ ನಡುವೆ ಪೋಷಕರನ್ನು ಕಳೆದುಕೊಂಡು ಮಗು ಅನಾಥವಾಗಿದೆ ಎಂಬ ವಿಚಾರ ತಿಳಿದು ಕೊತ್ತಲವಾಡಿ ಗ್ರಾಮಕ್ಕೆ ಮಕ್ಕಳ ಕಲ್ಯಾಣ ಸಮಿತಿಯು ಭೇಟಿ ನೀಡಿತ್ತು. ಈ ವೇಳೆ ಮಗುವಿನ ಚಿಕ್ಕಮ್ಮ ರಮ್ಯಾ ಹಾಗೂ ಅವರ ಪತಿ ಮಹದೇವಸ್ವಾಮಿ ಮಗುವನ್ನು ರಕ್ಷಣಾ ಸಮಿತಿ ವಶಕ್ಕೆ ನೀಡಲು ನಿರಾಕರಿಸಿದಲ್ಲದೆ, ತಾವೇ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ ಮಕ್ಕಳ ಕಾಯ್ದೆ 2015 ಪ್ರಕಾರ ರಕ್ತ ಸಂಬಂಧಿಗಳು ಮಗುವನ್ನು ದತ್ತು ಪಡೆಯುವ ಅರ್ಹರಿರುವುದರಿಂದ ಕಾನೂನಿನ ನಿಯಮದಂತೆ ಮಗುವನ್ನು ಅಧಿಕೃತವಾಗಿ ದತ್ತು ನೀಡಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.
ರಮ್ಯಾ ಮತ್ತು ಮಹದೇವಸ್ವಾಮಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು ತಾವು ಕಷ್ಟಪಟ್ಟು ದುಡಿದು ಮಗುವಿಗೆ ಯಾವುದೇ ಕೊರತೆ ಬಾರದಂತೆ ಸಾಕಿ ಸಲಹುದಾಗಿ ಹೇಳಿದ್ದಾರೆ.

By admin