ಮೈಸೂರು: ಲಾಕ್ ಡೌನ್ ಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಅದನ್ನು ಪಾಲಿಸುವ ಮೂಲಕ ಜನರು ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸುವುದು ಅಗತ್ಯವಾಗಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಪೊಲೀಸರು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.
ಮೇ. 10ರಿಂದ ಇಲ್ಲದ ನೆಪ ಹೇಳಿಕೊಂಡು ರಸ್ತೆಗೆ ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜಾರಿಯಾಗುವುದು ಖಚಿತ. ಮೈಸೂರಿನಲ್ಲಿ ಕೊರೋನಾ ತೀವ್ರತೆ ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆ ಸಜ್ಜಾಗಿದ್ದು ಈ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಪ್ರಕಟಣೆ ಹೊರಡಿಸಿದ್ದು ಅದು ಹೀಗಿದೆ..
ಕೋವಿಡ್-೧೯ ಹರಡುವಿಕೆಯ 2ನೇ ಅಲೆಯ ನಿಯಂತ್ರಣ ಸಂಬಂಧ ಮೇ.7 ರಂದು ಸರ್ಕಾರವು ಹೊರಡಿಸಿರುವ ನಿರ್ಬಂಧಗಳು ಮತ್ತು ಆದೇಶಗಳು ಮೇ. 10 ಸೋಮವಾರದಿಂದ ಜಾರಿಯಾಗಲಿದ್ದು, ನಗರದಾದ್ಯಂತ ಸರ್ಕಾರದ ನಿರ್ಬಂಧಗಳನ್ನು ಹಾಗೂ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.
ಸರ್ಕಾರದ ಆದೇಶದಲ್ಲಿ ತಿಳಿಸಿರುವ ಅಂಶಗಳಲ್ಲಿ ಪ್ರಮುಖವಾಗಿ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅವಶ್ಯಕ ವಸ್ತುಗಳ (ದಿನಸಿ, ಹಣ್ಣು, ತರಕಾರಿಗಳು) ಖರೀದಿ ಸಂಬಂಧ ನಿಗಧಿಪಡಿಸಿರುವ ಸಮಯದಲ್ಲಿ ಸಾರ್ವಜನಿಕರು ಈ ಕೆಳಕಂಡಂತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರು ದೈನಂದಿನ ಅವಶ್ಯಕ ವಸ್ತುಗಳನ್ನು (ದಿನಸಿ, ಹಣ್ಣು, ತರಕಾರಿಗಳು) ಖರೀದಿಸಲು ತಮ್ಮ ಮನೆಯ ಸಮೀಪದ ಅಂಗಡಿಗಳಿಗೆ ಹೋಗಬೇಕು ಮತ್ತು ಯಾವುದೇ ಸ್ವಂತ ವಾಹನಗಳನ್ನು ಉಪಯೋಗಿಸದೇ ಕಾಲ್ನಡಿಗೆಯಲ್ಲಿಯೇ ತೆರಳಬೇಕು.
ಒಂದು ವೇಳೆ ಸ್ವಂತ ವಾಹನಗಳನ್ನು (ದ್ವಿ ಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು) ಉಪಯೋಗಿಸಿದ್ದೇ ಆದಲ್ಲಿ, ಆ ವಾಹನಗಳನ್ನು 15 ದಿನಗಳವರೆಗೆ ಅಥವಾ ಸರ್ಕಾರದ ಉಲ್ಲೇಖದ ಆದೇಶ ಚಾಲ್ತಿಯಲ್ಲಿರುವವರೆಗೆ ಜಪ್ತಿ ಮಾಡಲಾಗುವುದು. ಗೂಡ್ಸ್ ವಾಹನ ಹೊರತುಪಡಿಸಿ ಯಾವುದೇ ಸ್ವಂತ ವಾಹನಗಳ ಓಡಾಟವನ್ನು ದೈನಂದಿನ ಅವಶ್ಯಕ ವಸ್ತುಗಳನ್ನು ಖರೀದಿಸಲು ಉಪಯೋಗಿಸಿದ್ದಲ್ಲಿ ಕಟ್ಟುನಿಟ್ಟಿನ ಕಾನೂನಿನ ಕ್ರಮ ಜರುಗಿಸಲಾಗುವುದು.
ಪ್ರತಿ ಮನೆಯ ಅಥವಾ ಕುಟುಂಬದ ಒಬ್ಬ ಸದಸ್ಯರು ಮಾತ್ರ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ನಿಗಧಿಪಡಿಸಿರುವ ಸಮಯದಲ್ಲಿ ಕಾಲ್ನಡಿಗೆಯಲ್ಲಿ ಹೋಗಬೇಕು. ಈ ರೀತಿಯ ಖರೀದಿಗೆ ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಇದನ್ನು ಜಾರಿಗೊಳಿಸಲು ಈ ಸಮಯದಲ್ಲಿ ಓಡಾಡುವವರಿಗೆ ಅವರು ನೀಡುವ ಸೂಕ್ತ ಕಾರಣಗಳ ಜೊತೆಗೆ ಅವರ ವಿಳಾಸವನ್ನು ಸಹ ಪರಿಶೀಲಿಸಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳಿಗೆ ಸೂಚಿಸಲಾಗಿದೆ.
ಕೋವಿಡ್-19 ನಿಯಂತ್ರಣದಲ್ಲಿ ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಆದೇಶಗಳ ಜಾರಿಗೆ ನಗರದ ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ನಗರದ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.