ಮೈಸೂರು: ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿರುವ ಎಸ್ ಯುಸಿಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಒಂಬತ್ತು ಬೇಡಿಕೆಗಳ ಈಡೇರಿಕೆಗಾಗಿ ಆನ್ ಲೈನ್ ಜನಾಂದೋಲನವನ್ನು ಗುರುವಾರ ನಡೆಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಮಿತಿಯ ಪದಾಧಿಕಾರಿಗಳು ಕೊರೋನ ಮಹಾಮಾರಿ ಯಿಂದ ಜನ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮೈಸೂರಿನಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು,. ಕೊರೋನಾ ಬಂದವರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಮೈಸೂರು ಜಿಲ್ಲಾಡಳಿತವನ್ನು ಎಚ್ಚರಿಸಲು ಜನ ಒಂದುಗೂಡಿ ಜನಾಂದೋಲನ ನಡೆಸಲಾಗುತ್ತಿದೆ. ಪದಾಧಿಕಾರಿಗಳು ತಾವು ಇರುವಲ್ಲಿಯೇ ನಮ್ಮ ಬೇಡಿಕೆಗಳ ಫೋಸ್ಟರ್ ಬರೆದು ಫೋಟೋವನ್ನು ತೆಗೆದು ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಲಾಗಿದೆ.
ಈ ಜನಾಂದೋಲನದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಕೆಲವು ಹಳ್ಳಿಗಳಿಂದ ಹಾಗೂ ಮೈಸೂರು ನಗರದ ವಿವಿಧ ಬಡಾವಣೆಯ ನಿವಾಸಿಗಳು ಸೇರಿದಂತೆ 200ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಜನಾಂದೋಲನದಲ್ಲಿ ಆರ್ ಟಿ ಪಿ ಸಿ ಆರ್ ವರದಿಯನ್ನು ಒಂದೇ ದಿನದಲ್ಲಿ ನೀಡಿರಿ, ಸೋಂಕಿತರ ಪತ್ತೆಹಚ್ಚಿ ಐಸೋಲೇಷನ್ ನಲ್ಲಿ ಇಡಬೇಕು, ಕೋವಿಡ್ ಕೇರ್ ಸೆಂಟರ್ ಸಂಖ್ಯೆಯನ್ನು ಹೆಚ್ಚಿಸಿ, ಅವಶ್ಯಕ ಸೌಕರ್ಯಗಳನ್ನು ಹಾಗೂ ವೈದ್ಯಕೀಯ ಸೇವೆಗಳನ್ನು ಒದಗಿಸಿ, ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಿ, ತಾಲ್ಲೂಕು ಹಾಗೂ ಮೈಸೂರು ನಗರದಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಬೆಡ್ ಗಳನ್ನು ಹೆಚ್ಚಿಸಿ, ರೋಗಿಗಳ ಜೀವ ಉಳಿಸಿ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಐಸಿಯು ಬೆಡ್ ಗಳ ಸಂಖ್ಯೆಯ ಪಾರದರ್ಶಕ ಮಾಹಿತಿಯನ್ನು ‘ವೆಬ್ ಪೋರ್ಟಲ್ ‘ನಲ್ಲಿ ನೀಡಿ, ಅವಶ್ಯಕತೆ ಇರುವಷ್ಟು ಆಮ್ಲಜನಕ ವ್ಯವಸ್ಥೆಯಿರುವ ಆಂಬುಲೆನ್ಸ್ ಹೆಚ್ಚಿಸಿ, ಸರ್ಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಔಷಧಿ ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಅವಶ್ಯಕತೆಗಳನ್ನು ಉಚಿತವಾಗಿ ಪೂರೈಸಿ, ಅವಶ್ಯಕತೆ ಇರುವಷ್ಟು ಆರೋಗ್ಯ ಸಿಬ್ಬಂದಿಗಳನ್ನು ತುರ್ತಾಗಿ ನೇಮಕಾತಿಗೊಳಿಸಿ, ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿ, ಸರಿಯಾಗಿ ಸ್ಪಂದಿಸದ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಿ,ಈ ಕೂಡಲೇ ಸಾರ್ವತ್ರಿಕ ಉಚಿತ ಲಸಿಕೆ ನೀಡುವುದು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪಿಎಚ್ ಸಿ ಮಟ್ಟದಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಲಾಯಿತಲ್ಲದೆ, ಮನವಿಯನ್ನು ಜಿಲ್ಲಾಧಿಕಾರಿ ಮತ್ತು ಮೈಸೂರಿನ ಉಸ್ತುವಾರಿ ಸಚಿವರಿಗೆ ಪತ್ರಮುಖೇನ ಸಲ್ಲಿಸಲಾಯಿತು.
ಈ ಜನಾಂದೋಲನದಲ್ಲಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರವಿ ಜಿಲ್ಲಾ ಸಮಿತಿ ಸದಸ್ಯರಾದ ಸಂಧ್ಯಾ, ಉಮಾದೇವಿ, ಚಂದ್ರಶೇಖರ್ ಮೇಟಿ, ಸೀಮಾ, ಹರೀಶ್, ಸುನಿಲ್ ಹಾಗೂ ಪಕ್ಷದ ಸದಸ್ಯರಾದ ಆಸೀಯಾ, ಅಭಿಲಾಷ, ಬಸವರಾಜು, ಸುಭಾಷ್ ಭಾಗವಹಿಸಿದ್ದರು.