ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ತಾಲೂಕಿನ ಮೊಳೆಯೂರು ವಲಯ ಅರಣ್ಯದೊಳಗಡೆ ಕೆಲಸ ನಿರ್ವಹಿಸುತ್ತಿದ್ದಾಗ ಅರಣ್ಯ ವೀಕ್ಷಕನೊರ್ವ ಸೋಮವಾರ ರಾತ್ರಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ.
ತಾಲೂಕಿನ ನೆಟ್ಕಾಲ್‍ಹುಂಡಿ ಗ್ರಾಮದ ರವಿ(27) ಸಾವನ್ನಪ್ಪಿದವ. ಈತನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಅರಣ್ಯದೊಳಗಡೆ ಸೋಮವಾರ ರಾತ್ರಿ ಸೇವೆ ಸಲ್ಲಿಸುತ್ತಿದ್ದ ತನ್ನ ಪತಿ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾರೆಂದು ರವಿ ಪತ್ನಿ ಅಂಬಿಕಾ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ರವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಘಟನೆ ವಿವರ: ಎಂಟು ವರ್ಷಗಳಿಂದ ಅರಣ್ಯ ಇಲಾಖೆಗೆ ಅರಣ್ಯ ವೀಕ್ಷಕರಾಗಿ ನೇಮಕಗೊಂಡ ರವಿ ಮೊಳೆಯೂರು ವಲಯ ಅರಣ್ಯದಲ್ಲಿ ಅರಣ್ಯ ವೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ರಾತ್ರಿ ಪಾಳಿ ಕೆಲಸಕ್ಕೆ ಸೋಮವಾರ ಸಂಜೆ 5ಗಂಟೆಗೆ ನೆಟ್ಕಾಲ್‍ಹುಂಡಿ ಗ್ರಾಮದ ಮನೆಯಿಂದ ಹೊರಟು ಕೆಲಸಕ್ಕೆ ಹಾಜರಾಗಿದ್ದು, ರಾತ್ರಿ 8.30ರ ವೇಳೆ ಪತ್ನಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾನೆ. ಅಲ್ಲದೆ ಮಧ್ಯರಾತ್ರಿ 12ರ ವೇಳೆ ರವಿ ತನ್ನ ಬಾವನಿಗೂ ಕರೆ ಮಾಡಿ ಮಾತುಕತೆ ನಡೆಸಿದ್ದಾನೆ ಎನ್ನಲಾಗಿದೆ.

 

ಆದರೆ, ಅರಣ್ಯಾಧಿಕಾರಿಗಳು ಪತಿಯ ಸಾವನ್ನು ಹೃದಯಾಘಾತವೆಂದು ಸುಳ್ಳು ಹೇಳುತ್ತಿದ್ದಾರೆ. ರವಿ ಅವರು ಆರೋಗ್ಯವಾಗಿದ್ದರು. ಮಂಗಳವಾರ ಮುಂಜಾನೆ ಕಾಡಾನೆ ದಾಳಿ ನಡೆಸಿ ತನ್ನ ಪತಿ ರವಿ ಕೊಂದಿದೆ ಎಂದು ಪತ್ನಿ ಅಂಬಿಕಾ ದೂರಿದ್ದಾಳೆ. ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

By admin