ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಸ್ಮರಿಸುವ ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಕಾರ್ಯಕ್ರಮ ನಗರದಲ್ಲಿಂದು ನಡೆಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿಂದು ನಗರಸಭಾ ಅಧ್ಯಕ್ಷರಾದ ಆಶಾ ನಟರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರುಗಳು ಹಸಿರು ನಿಶಾನೆ ತೋರುವ ಮೂಲಕ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾರತ ಅಮೃತ ಸ್ವಾತಂತ್ರ್ಯದ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ನಾದಸ್ವರ, ಬ್ಯಾಂಡ್‌ಸೆಟ್, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದ ಮಕ್ಕಳು, ಶಾಲಾಮಕ್ಕಳು, ವಿವಿಧ ಸ್ತ್ರೀಶಕ್ತಿ ಸಂಘದ ಸದಸ್ಯರು, ಸಂಘಸಂಸ್ಥೆಗಳು ಭಾಗವಹಿಸಿದ್ದವು.
ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಭುವನೇಶ್ವರಿ ವೃತ್ತ, ಕೆಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ದೇವಾಂಗ ಬೀದಿ, ಮಹಾವೀರ ವೃತ್ತದ ಮೂಲಕ ಮಾರಿಗುಡಿಯ ಮುಂಭಾಗದ ಆವರಣಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಭಾರತ್ ಮಾತಾಕೀ ಜೈ ಹಾಗೂ ವಂದೇ ಮಾತರಂ ಉದ್ಘೋಷಗಳು ಮುಗಿಲು ಮುಟ್ಟುವಂತಿತ್ತು. ಬಳಿಕ ಮಾರಿಗುಡಿಯ ಆವರಣದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಶಿಲಾಫಲಕವನ್ನು ಗಣ್ಯರು ಅನಾವರಣಗೊಳಿಸಿದರು.
