ಚಾಮರಾಜನಗರ: ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಜಿಲ್ಲೆಯಲ್ಲಿ ಜೂನ್ ೨೫ರಂದು ನಡೆಯುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಸ್ಮರಿಸುವ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ಸಂಬಂಧ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂನ್ ೨೫ರಂದು ನಗರದ ಮಾರಿಗುಡಿ ಹತ್ತಿರ ಹಾಗೂ ಗುಂಡ್ಲುಪೇಟೆಯ ನೆಹರು ಉದ್ಯಾನವನದಲ್ಲಿ ಏಕಕಾಲದಲ್ಲಿ ಆಯೋಜಿಸಲಾಗುವ ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕದ ಹಾಗೂ ಜಿಲ್ಲೆಯ ಕೊಡುಗೆಯನ್ನು ಸ್ಮರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಾತಂತ್ರ ಹೋರಾಟದ ವಿವಿಧ ಮಜಲುಗಳನ್ನು ಸ್ಮರಿಸುವ ಸಲುವಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಅಮೃತ ಭಾರತಿಗೆ ಕನ್ನಡದ ಆರತಿ ವಿಶೇಷ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಪೂರ್ಣಕುಂಭದೊಂದಿಗೆ ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಭುವನೇಶ್ವರಿ ವೃತ್ತ, ಕೆಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ದೇವಾಂಗ ಬೀದಿ, ಮಹಾವೀರ ವೃತ್ತದ ಮೂಲಕ ಮಾರಿಗುಡಿಯ ಮುಂಭಾಗದ ಆವರಣಕ್ಕೆ ತಲುಪಲಿದೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ನಾದಸ್ವರ, ಬ್ಯಾಂಡ್‌ಸೆಟ್, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದ ಮಕ್ಕಳೊಂದಿಗೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆ ಜವಾಬ್ದಾರಿಯಿಂದ ಹೊಣೆಗಾರಿಕೆ ನಿರ್ವಹಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಮೆರವಣಿಗೆಯ ಬಳಿಕ ವೇದಿಕೆ ಬಳಿ ಅಮೃತ ಭಾರತಿಗೆ ಕನ್ನಡದ ಆರತಿ ಕುರಿತ ಶಿಲಾಫಲಕವನ್ನು ಅನಾವರಣಗೊಳಿಸಲಾಗುತ್ತದೆ. ವೇದಿಕೆಯ ಒಂದು ಭಾಗದಲ್ಲಿ ಸ್ವಾತಂತ್ರ ಹೋರಾಟಗಾರರ ಕುರಿತ ೩೦ ನಿಮಿಷಗಳ ಕಿರುಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯ ಚಳವಳಿಗೆ ಈ ನಾಡು ಹಾಗೂ ನೆಲದ ಹೋರಾಟದ ನೆನಪುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರಮುಖ ಕಾರ್ಯಕ್ರಮವಾಗಿ ಅಮೃತ ಭಾರತಿಗೆ ಕನ್ನಡದ ಆರತಿ ರೂಪುಗೊಳಿಸಲಾಗಿದೆ.
ಬೆಂಗಳೂರಿನ ವಿದ್ಯಾಭಾರತಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಅವರು ಮುಖ್ಯ ಭಾಷಣ ಮಾಡುವರು ಎಂದರು.
ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಕುರಿತು ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಮಕ್ಕಳು, ಸಾರ್ವಜನಿಕರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಎನ್.ಸಿ.ಸಿ, ಎನ್.ಎಸ್.ಎಸ್ ಸ್ವಯಂ ಸೇವಕರು ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಎಲ್ಲರು ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ತಹಶೀಲ್ದಾರ್ ಬಸವರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗಮಲ್ಲೇಶ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಶರವಣ, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.