ನವಜಾತ ಶಿಶುಗೆ ಜನುಮ
ನೀಡುವ ಸಲುವಾಗಿ ನೀ
ಪುನರ್ಜನ್ಮ ಪಡೆಯುವ
ಪರಮಪೂಜ್ಯ ಜನನಿ
ಅಷ್ಟ ಕಷ್ಟಗಳೆಲ್ಲವನೂ
ಒಬ್ಬಳೇ ನುಂಗಿ ನಲುಗಿ ನೀ
ಇಷ್ಟ ಸ್ವಾದಿಷ್ಟದ್ದೆಲ್ಲವನೂ
ಕಂದಂಗೆ ನೀಡುವ ಮಾನಿನಿ
ಕಿಂಚಿತ್ತೂ ಅಹಂಭಾವ ಇರದ
ನಿಸ್ವಾರ್ಥ ತ್ಯಾಗ ತರಂಗಿನಿ
ಭುವಿ-ಭವ-ಸರ್ವ ರೋಗಕೂ ನೀ
ಸಕಾಲಿಕ ಸಾರ್ವಕಾಲಿಕ ಸಂಜೀವಿನಿ
ತಪ್ಪು ನಡೆ ತೊದ್ಲು ನುಡಿ ತಿದ್ದಿ ತೀಡಿ
ವಿದ್ಯೆ ಬುದ್ಧಿ ಸಂಸ್ಕೃತಿ ಸಂಸ್ಕಾರ ನೀಡಿ
ತಂದೆ ಗುರು ಬಂಧು ಬಳಗ
ಶತ್ರುಮಿತ್ರ ಹಿತಶತ್ರು ಎಲ್ಲರನ್ನೂ
ಇಷ್ಟಾನಿಷ್ಟ ಧರ್ಮಾಧರ್ಮ ಸತ್ಯಾಸತ್ಯ
ಲೋಕಾಲೋಕ ಎಲ್ಲವನ್ನೂ
ಹಸುಗೂಸಿಗೆ ಪರಿಚಯ ಮಾಡಿ
ಮಾತುಕಲಿಸಿದ ಮಹಾತಾಯಿ ನೀನು
ಅಂಬಲಿ ಇರಲಿ ಮೃಷ್ಟಾನ್ನ ವಿರಲಿ
ಮಕ್ಕಳಿಗೆ ಮೊದಲು ಉಣಿಸುವ
ಮಡಿಲ ಮಮತೆಯ ಮಾತೆ ನೀನು
ಅಜ್ಞಾನಿ ಸು(ವಿ)ಜ್ಞಾನಿ ಯಾರೇ ಆಗಲಿ
ಕುಖ್ಯಾತ ಪ್ರಖ್ಯಾತ ಏನೇ ಆಗಿರಲಿ
ಅಮೃತವನೇ ಧಾರೆಯೆರೆದು
ಕಾಪಾಡುವ ಅನರ್ಘ್ಯರತ್ನ ನೀನು
ವೈದ್ಯ ವಕೀಲ ಶಿಲ್ಪಿ ಕಲೆಗಾರ
ಮಂತ್ರಿ ಶಾಸಕ ಕಂತ್ರಿ ಕಾಲೀಗಾರ
ಭಂಡ ಷಂಡ ಚಂಡ ಪುಂಡ
ತನ್ನ ಕೂಸು ಹೇಗೇ ಇರಲಿ
ಸಮಪಾಲು ಸರಿಬಾಳು ನೀಡುತಲಿ
ಸದಾ ಸಲಹುವ ನಮ್ಮಮ್ಮ ನೀನು
ಅಪವಿತ್ರೆ ಪುತ್ರಿ, ಅಷ್ಟಾವಕ್ರ ಪುತ್ರ
ಅನಿಷ್ಟರಾಗಿದ್ದರೂ ಸಹನೆಯಿಂದ
ಹಗಲಿರುಳು ಹರಸುವ ಧರಣಿ ನೀನು
ತನ್ನಕರುಳ ಕುಡಿಯೇ ಶ್ರೇಷ್ಠವೆನುತಾ
ವಾದಿಸುವ ಪ್ರತಿಪಾದಿಸುವ ವನಿತಾ
ಏಳು ಜನ್ಮದ ಶಾಪ ತೊಡೆದುಹಾಕುವ
ಏಳೇಳು ಜನ್ಮದ ಪಾಪ ತೊಳೆಯುವ
ಪರಮ ಪಾವನ ಪುನೀತೆ ನೀನು
ಜೇಷ್ಠ ಪ್ರಜೆಯೋ ಶ್ರೇಷ್ಠ ಕವಿಯೋ
ಕನಿಷ್ಠ ಕಾವಲಿನ ಯಾರೊ ಏನೋ
ಕಾಡೋಜನೋ ನಾಡೋಜನೋ
ಯಾರಾದರೂ ಆಗಿರಲಿ ಎಲ್ಲರಿಂದ
ನಮ್ಮಿಂದ ಒಲವಿಂದ ನಲಿವಿಂದ
ವಂದನಾರ್ಹ ಅಭಿನಂದನಾರ್ಹ
ದೇವರು-ತಾಯಿದೇವರು ನೀನು

ಕುಮಾರಕವಿ ಬಿ.ಎನ್.ನಟರಾಜ
9036976471
ReplyReply allForward |