ಸರಗೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ತಾಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಸದರ ನಿಧಿಯಿಂದ ಕೊಡುಗೆಯಾಗಿ ನೀಡಲಾದ ಅಂಬ್ಯುಲೆನ್ಸ್‌ಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಚಾಲನೆ ನೀಡಿದರು.ಸರಗೂರು: ಕಬಿನಿ ಜಲಾಶಯದ ಬಳಿ ಉದ್ಯಾನವನ ಮಾಡಿದರೆ ಮಾತ್ರ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ತಾಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಸದರ ನಿಧಿಯಿಂದ ಕೊಡುಗೆಯಾಗಿ ನೀಡಲಾದ ಅಂಬ್ಯುಲೆನ್ಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕು ಸಂವೃದ್ಧಿಯಾಗಿ ಬೆಳೆಯಲು ಸಾರ್ವಜನಿಕರು, ಖಾಸಗೀಯವರು ಹಾಗೂ ಸರಕಾರ ಜತೆಗೂಡಿ ಬಂಡಾವಾಳ ಹಾಕಿ ಕಬಿನಿ ಜಲಾಶಯದ ಬಳಿ ಸುಂದರವಾದ ಉದ್ಯಾನವನವನ್ನು ನಿರ್ಮಿಸಬೇಕು. ಇದರಿಂದ ರಸ್ತೆಗಳ ಅಭಿವೃದ್ಧಿ, ವ್ಯಾಪಾರ ವಹಿವಾಟು ಚೆನ್ನಾಗಿ ನಡೆದು ತಾಲೂಕು ಸಂವೃದ್ಧಿಯಾಗಿ ಅಭಿವೃದ್ಧಿ ಹೊಂದಲಿದೆ. ಉದ್ಯಾನವನ ನಿರ್ಮಿಸುವ ಕುರಿತು ಸರಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದರು.

ನಾನು ಕಂದಾಯ ಮಂತ್ರಿಯಾಗಿದ್ದಾಗ ಸರಗೂರು ನೂತನ ತಾಲೂಕಿನ ಬಗ್ಗೆ ಬಹಳಷ್ಟು ಚಿಂತನೆ ಇಟ್ಟುಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓಟ್‌ಬ್ಯಾಂಕ್‌ಗಾಗಿ ಸರಗೂರನ್ನು ತಾಲೂಕಾಗಿ ಘೋಷಣೆ ಮಾಡಿ ಹಾಳು ಮಾಡಿದ್ದಾರೆ. ಕನಿಷ್ಠ ಪಕ್ಷ ೫ ಕೋಟಿ ರೂ.ಅನುದಾನದಿಂದಾದರೂ ನೂತನ ತಾಲೂಕು ಅಭಿವೃದ್ಧಿ ಶುರುವಾಗಬೇಕು. ಆದರೂ ಇನ್ನೂ ಅಭಿವೃದ್ಧಿ ಕಂಡಿಲ್ಲ. ಇಲಾಖೆಗಳು ಸಮರ್ಪಕವಾಗಿ ಬಂದಿಲ್ಲ. ಸಿದ್ದರಾಮಯ್ಯ ಅವರು ಬಹಳ ತಪ್ಪು ಮಾಡಿದ್ದಾರೆ. ಮೊದಲು ಸರಗೂರನ್ನು ಹೋಬಳಿ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡುವ ಚಿಂತನೆ ಮಾಡಿದ್ದೆ. ನಂತರ ನಂಜನಗೂಡು ತಾಲೂಕಿನ ಕೆಲ ಭಾಗವನ್ನು ಗುರುತಿಸಿ, ಅದನ್ನು ಸರಗೂರು ತಾಲೂಕಿಗೆ ಸೇರಿಸಿಕೊಂಡು ಅಭಿವೃದ್ಧಿ ಮಾಡುವ ಚಿಂತನೆ ಮಾಡಿದ್ದೆ. ಎಲ್ಲವನ್ನೂ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ ಎಂದರು.

ಸಂಸದ ನಿಧಿಯಿಂದ ೫೦ ಲಕ್ಷ ರೂ. ವೆಚ್ಚದಲ್ಲಿ ಅಂಬ್ಯುಲೆನ್ಸ್ ಅವಶ್ಯಕತೆ ಇರುವೆಡೆ ಅಂಬ್ಯುಲೆನ್ಸ್ ನೀಡಲಾಗುವುದು. ಹೀಗಾಗಿಯೇ ಸರಗೂರು ಭಾಗದ ಕಾಡಂಚಿನ ಪ್ರದೇಶ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸರಗೂರು ಪಟ್ಟಣ, ಎನ್.ಬೇಗೂರಿಗೆ ಪ್ರತ್ಯೇಕವಾಗಿ ಅಂಬ್ಯುಲೆನ್ಸ್ ನೀಡಲಾಗುವುದು. ವೈದ್ಯರು, ಹೆರಿಗೆ ಮಾಡಿಸುವ ತಜ್ಞರ ಕೊರತೆ ಇದ್ದು, ಈ ಕುರಿತು ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕೊರೋನಾ ಮಹಾಮಾರಿಯಿಂದಾಗಿ ಜನರ ತತ್ತರಿಸಿದ್ದಾರೆ. ಈಗ ಜನರಲ್ಲಿ ಸ್ವಲ್ಪ ನೆಮ್ಮದಿ ಇದೆ. ಪ್ರಪಂಚನೆ ನಡುಗಿ ಹೋಗಿತ್ತು. ಹೀಗಾಗಿ ಎರಡು, ಮೂರು ವರ್ಷಗಳಿಂದ ಹೇಗೆ ಈ ಕಾಯಿಲೆ ಹೆದರಿಸುವುದು. ಅದರಲ್ಲೂ ಬಡವರು ಸ್ಥಿತಿ-ಗತಿ ಏನು ಎಂಬುದರ ಬಗ್ಗೆ ಚಿಂತಾಜನಕವಾಗಿತ್ತು. ಇದರ ನಿಯಂತ್ರಣಕ್ಕೆ ವೈದ್ಯಲೋಕ, ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಶಕ್ತಿಮೀರಿ ಶ್ರಮಿಸಿದ್ದಾರೆ ಎಂದರು. 

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ವಿನಯ್, ಬಿ.ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಬಾಯಿ ಮಲ್ಲೇಶ್‌ನಾಯಕ, ಉಪಾಧ್ಯಕ್ಷ ದೇವದಾಸ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಉಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕುರ್ಣೇಗಾಲ ಬೆಟ್ಟಸ್ವಾಮಿ, ಸೋಮ, ಮಲ್ಲೇಶ್‌ನಾಯಕ, ಬೊಮ್ಮ, ರಾಣಿಬಾಯಿ ನಾಗನಾಯಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಡಾ.ಪಾರ್ಥಸಾರಥಿ, ಬಿಜೆಪಿ ಮುಖಂಡರಾದ ಡಿ.ಜಿ.ಶಿವರಾಜು, ಸಿ.ಕೆ.ಗೀರೀಶ್, ಗುರುಸ್ವಾಮಿ, ಪರಶಿವಮೂರ್ತಿ, ರಮೇಶ್, ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.