ಪಾಂಡವಪುರ: ಕೊರೊನಾ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸೇವೆ ದೊರಕಿಸುವ ಸಲುವಾಗಿ ರೈತಸಂಘ, ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಶನ್, ದರ್ಶನ್ ಪುಟ್ಟಣ್ಣಯ್ಯ ಅಭಿಮಾನಿಗಳ ವತಿಯಿಂದ ಆಕ್ಸಿಜನ್ ಸಹಿತ ಆಂಬುಲೆನ್ಸ್ ಹಾಗೂ 1 ಸಾವಿರ ಔಷಧಿ ಕಿಟ್‌ಗಳನ್ನು ವಿತರಿಸಲಾಯಿತು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ರೈತಸಂಘ ಮುಖಂಡರು ಆಂಬ್ಯುಲೆನ್ಸ್ ಹಾಗೂ ಔಷಧಿ ಕಿಟ್‌ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದರು. ಕಿಟ್‌ನಲ್ಲಿ ಸ್ಯಾನಿಟೈಸರ್ ಬಾಟಲ್, ಸೋಪು, ಪ್ಯಾರಸೆಟಮಲ್, ವಿಟಮಿನ್ ಸಿ ಮಾತ್ರೆಗಳು ಹಾಗೂ ಸರ್ಜಿಕಲ್ ಮಾಸ್ಕ್ ಸೇರಿದಂತೆ ಸೋಂಕಿತರಿಗೆ ಅಗತ್ಯವಿರುವ ಇತರೆ ಔಷಧಿಗಳು ಇದ್ದವು.
ಈ ವೇಳೆ ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಮಾತನಾಡಿ, ಸೋಂಕಿತರಿಗೆ ಅನುಕೂಲವಾಗುವಂತೆ ಅಗತ್ಯಗಳನ್ನು ಪೂರೈಸುವುದಾಗಿ ತಾಲೂಕು ಆಡಳಿತದ ಬಳಿ ಮನವಿ ಮಾಡಿಕೊಂಡು ವೆಂಟಿಲೇಟರ್ ಆಥವಾ ಕೋವಿಡ್ ಸೆಂಟರ್ ತೆರೆಯುವುದಾಗಿ ಮನವಿ ಮಾಡಿಕೊಂಡೆವು. ಇದಕ್ಕೆ ತಹಸೀಲ್ದಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸಮ್ಮತಿಸಲಿಲ್ಲ. ಕಾರಣ ವೆಂಟಿಲೇಟರ್ ಮತ್ತು ಕೋವಿಡ್ ಸೆಂಟರ್ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೋರಿದರು ಈ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಸೇವೆ ಸಲ್ಲಿಸಲಾಗಿದೆ. ಆಕ್ಸಿಜನ್ ಮತ್ತು ಬೆಡ್ ಸಿಗದೆ ಇರುವ ಸಂದರ್ಭದಲ್ಲಿ ಒಂದೊಂದು ಜೀವವು ಮುಖ್ಯವಾಗಿದೆ. ಹೀಗಾಗಿ ನಮ್ಮ ಅಳಿಲು ಸೇವೆ ಸಾರ್ಥಕವಾದರೆ ಸಾಕು ಎಂದು ಹೇಳಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಪಾಂಡವಪುರ ತಾಲೂಕಿನಲ್ಲಿ ಹೆಚ್ಚಿನ ಕೋವಿಡ್ ಸೋಂಕಿತರು ಇದ್ದಾರೆ, ಅವರ ಆರೋಗ್ಯದ ಹಿತದೃಷ್ಟಿಯಿಂದ ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಈ ತೀರ್ಮಾನ ಕೈಗೊಂಡಿದ್ದು, ದೇಶದಲ್ಲಿ ಶೀಘ್ರವೇ ಕೊರೊನಾ ಮುಕ್ತವಾಗಲಿ ಎಂದು ಆಶಿಸಿದರು.
ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್‌ಗಳ ವೈದ್ಯರುಗಳು ತಮ್ಮಲ್ಲಿ ತಪಾಸಣೆಗೆ ಬರುವ ರೋಗಿಗಳನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಬೇಕು. ಇಲ್ಲದಿದ್ದರೆ ಕ್ಲಿನಿಕ್‌ಗಳ ವೈದ್ಯರುಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಂಬ್ಯುಲೆನ್ಸ್ ಹಾಗೂ ಕೊರೊನಾ ಸೋಂಕಿತರಿಗೆ ಔಷಧ ಕಿಟ್‌ಗಳನ್ನು ನೀಡಿರುವ ರೈತಸಂಘದ ಮುಖಂಡರಿಗೆ ಅಭಿನಂದನೆಗಳು ಎಂದರು.
ಈ ವೇಳೆ ತಹಸೀಲ್ದಾರ್ ಪ್ರಮೋದ್‌ಎಲ್.ಪಾಟೀಲ್, ತಾಪಂ ಇಒ ಆರ್.ಪಿ.ಮಹೇಶ್, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರೈತಸಂಘ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೋಟಿ ಶಂಕರೇಗೌಡ, ಲೋಕೇಶ್, ಎಣ್ಣೆಹೊಳೆಕೊಪ್ಪಲು ಮಂಜು, ವೈ.ಜಿ.ರಘು, ಯುವರಾಜು, ಸುಂಕಾತೊಣ್ಣೂರು ಶ್ರೀನಿವಾಸ್, ಹಿರೇಮರಳಿ ಲೋಹಿತ್, ಕಿಶೋರಿ ಇತರರು ಇದ್ದರು.