ನಗರದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಇನ್ನೆರಡ್ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅವಶ್ಯವಿದ್ದ ಬಾಕಿ ಹಣ 17 ಕೋಟಿ ರೂ. ಬಿಡುಗಡೆಗೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಮೂಡಾಗೆ ಹಣ ವರ್ಗಾವಣೆ ಆಗಲಿದೆ. ಇನ್ನೆರಡ್ಮೂರು ತಿಂಗಳಲ್ಲಿ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಈ ವರ್ಷ ಕೋವಿಡ್ ಪ್ರಮಾಣ ಇಳಿಕೆಯಾಗಿರುವುದರಿಂದ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ನಾಗೇಂದ್ರ, ರಾಮದಾಸ್, ತನ್ವೀರ್ ಸೇಠ್, ಸಂಸದರಾದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಮೇಯರ್ ಸುನಂದಾ ಪಾಲನೇತ್ರ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತರಾದ ಲಕ್ಷ್ಮೀಕಾಂತ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟನೆ ಮಾಡಿದರು. ಇದೇ ವೇಳೆ ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು