ಚಾಮರಾಜನಗರ: ವಿದ್ಯಾರ್ಥಿಗಳಿಗೆ ಸಾಂಪ್ರಾದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯ ಆಧಾರಿತ ಶಿಕ್ಷಣ ದೊರೆತಾಗ ಮಾತ್ರ ಸೂಕ್ತ ಉದ್ಯೋಗ ದೊರೆಯಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಬಿ.ಎಸ್. ಹೊನ್ನಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮೂಡಲಧ್ವನಿ ವೃದ್ದಾಶ್ರಮ ಟ್ರಸ್ಟ್ ಹಾಗೂ ಸಮಷ್ಠಿ ಸಮಗ್ರ ಅಭಿವೃದ್ದಿ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಕೇವಲ ಸಾಂಪ್ರದಾಯಿಕ ಶಿಕ್ಷಣ ಪಡೆದರೆ ಸಾಲದು ಜೊತೆಗೆ ಕೌಶಲ್ಯ ಆಧಾರಿತ ಶಿಕ್ಷಣವೂ ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಪ್ರತಿಭೆ ಇರುತ್ತದೆ. ಸೂಕ್ತ ವೇದಿಕೆ ದೊರೆತಾಗ ಮಾತ್ರ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದು ಬಿ.ಎಸ್. ಹೊನ್ನಸ್ವಾಮಿ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ. ಮಹಮ್ಮದ್ ಅಕ್ಬರ್ ಮಾತನಾಡಿ, ಕೈಗಾರಿಕೆಗಳಲ್ಲಿ ಉದೋಗ ಪಡೆಯಬೇಕಾದರೆ ತಂತ್ರಜ್ಞಾನ ಕುರಿತು ಕೌಶಲ್ಯ ಜ್ಞಾನ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ ಶಿಕ್ಷಣ ಪಡೆಯುವತ್ತ ಆಸಕ್ತಿ ತೋರಬೇಕು. ಪಠ್ಯದ ಜೊತೆಗೆ ತಾಂತ್ರಿಕ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದ ಪರಿಭಾಷೆ ಬದಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಟಿ. ಪುಟ್ಟಸ್ವಾಮಿ, ಸಿಡಾಕ್ ಜಂಟಿ ನಿರ್ದೇಶಕರಾದ ಮಂಜುನಾಥ್‌ಸ್ವಾಮಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಡೇ ನಲ್ಮ್ ನಗರ ಅಭಿಯಾನ ವ್ಯವಸ್ಥಾಪಕರಾದ ಹಮ್‌ಜತ್ ಪಾಷ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿಯೋಜನಾಧಿಕಾರಿ ಆರ್. ಮಲ್ಲೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಂಯೋಜಕರಾದ ಡಿ. ನಾಗರಾಜು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಮಾಲೋಚಕರು ಮತ್ತು ಟ್ರೈನರ್ ವಿನೋದ್‌ಕುಮಾರ್, ಸಮಷ್ಠಿ ಜಾಬ್ ಪೋರ್ಟಲ್ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಸಿದ್ದರಾಜು, ಸಮಷ್ಠಿ ಸಮಗ್ರ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯನಿರ್ವಾಹಕರಾದ ಗಂಗಾಧರ್‌ಸ್ವಾಮಿ, ಮೂಡಲಧ್ವನಿ ವೃದ್ಧಾಶ್ರಮ ಟ್ರಸ್ಟ್‌ನ ಅಧ್ಯಕ್ಷರಾದ ಶಂಕರ್ ಇತರರು ಉಪಸ್ಥಿತರಿದ್ದರು.