ಮೈಸೂರು: ಕನ್ನಡದ ಸೇವೆ ಮಾಡುವ ಮನಸಿದ್ದರೆ ಹೀಗೂ ಸೇವೆ ಮಾಡಬಹುದು ಎಂಬುದನ್ನು ಸಾಂಸ್ಕøತಿಕ ನಗರಿ ಮೈಸೂರಿನ ವಿದ್ಯಾರಣ್ಯಪುರಂನ ಸಲೂನ್ ಮಾಲೀಕ ಮಂಜುನಾಥ್ ತೋರಿಸಿಕೊಟ್ಟಿದ್ದಾರೆ.

ಸಾಮಾನ್ಯವಾಗಿ ನವೆಂಬರ್ ತಿಂಗಳು ಬಂದಾಗ ಮಾತ್ರ ಹೆಚ್ಚಿನವರಿಗೆ ಕನ್ನಡದ ಸೇವೆ ನೆನಪಾಗುತ್ತದೆ ಆದರೆ ಮಂಜುನಾಥ್ ಅವರ ಕನ್ನಡದ ಸೇವೆ ಮಾತ್ರ ವಿಭಿನ್ನವಾಗಿದೆ. ಇವರದು ಸರ್ವ ಕಾಲಕ್ಕೂ ಸಲ್ಲುವ ಕನ್ನಡದ ಸೇವೆಯಾಗಿದೆ. ಹಾಗಾದರೆ ಮಂಜನಾಥ್ ಅವರು ಕನ್ನಡಕ್ಕೆ ಮಾಡುತ್ತಿರುವ ಅಳಿಲು ಸೇವೆ ಯಾವುದು ಎಂಬ ಕುತೂಹಲ ಎಲ್ಲರನ್ನು ಕಾಡದಿರದು.

ಹಾಗೆನೋಡಿದರೆ ಕನ್ನಡ ಎಂದರೆ ಮಾತೃ ಭಾಷೆ ಎಂಬ ಅಭಿಮಾನ ಕನ್ನಡ ನಾಡಿನ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹಲವು ಕಾರಣಕ್ಕೆ ಕರ್ನಾಟಕದಲ್ಲಿ ಕನ್ನಡ ಅಪರಿಚಿತವಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡದ ಉಳಿವಿಗಾಗಿ ಕನ್ನಡದ ಕಂಪನ್ನು ಸೂಸುವಂತೆ ಮಾಡುವಲ್ಲಿ ಮಂಜುನಾಥ್ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಇವರು ಬಿಎ ಪದವೀಧರರಾದರೂ ಕುಲಕಸುಬನ್ನು ಮಾಡುತ್ತಾ ಬಂದಿದ್ದಾರೆ. ಅದರ ಜತೆಗೆ ಕನ್ನಡದ ಸೇವೆಗೂ ಟೊಂಕಕಟ್ಟಿ ನಿಂತಿದ್ದಾರೆ.

ವಿದ್ಯಾರಣ್ಯಪುರಂನ ಸುಯೇಜ್ ಫಾರಂ ರಸ್ತೆಯಲ್ಲಿರುವ ತಮ್ಮ ಸೂಪರ್ ಸ್ಟೈಲ್ ಮೆನ್ಸ್ ಸಲೂನ್‍ನಲ್ಲಿ ಕನ್ನಡದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತರ ಹಾಗೂ ಕನ್ನಡ ಸಾಹಿತ್ಯ ಲೋಕದ ದಿಗ್ಗಜರುಗಳ ಫೋಟೋಗಳನ್ನು ಹಾಕುವ ಮೂಲಕ ಕನ್ನಡದ ಮಹತ್ವವನ್ನು ಜನತೆಗೆ ಸಾರುತ್ತಿದ್ದಾರೆ. ತಮ್ಮ ತಂದೆಯ ಕಸುಬನ್ನು ಮುಂದುವರೆಸುತ್ತಾ ಬಂದಿದ್ದಾರೆ. ಇವರು 2011ರಲ್ಲಿ ನಗರ ಪಾಲಿಕೆಯ ಸದಸ್ಯರೂ ಕೂಡ ಆಗಿದ್ದರು. ಸವಿತ ಸುದ್ದಿ ಎಂಬ ಪತ್ರಿಕೆಯನ್ನು ಹೊರತಂದು ಹಲವು ಕಾರಣಗಳಿಂದ ಪತ್ರಿಕೆಯನ್ನು ನಿಲ್ಲಿಸಲಾಯಿತು. ಸತತ 25 ವರ್ಷಗಳಿಂದ ಸಲೂನ್ ನಡೆಸುತ್ತಿದ್ದು ಇಲ್ಲಿ ವಿಭಿನ್ನ ರೀತಿಯ ಕುವೆಂಪು ಮಿಷನ್ ಕಟಿಂಗ್, ದಾ.ರಾ. ಬೇಂದ್ರೆ ಬ್ಲೀಚಿಂಗ್, ಮಾಸ್ತಿ ಸೀಜರ್ ಕಟಿಂಗ್, ಕಾರಂತ ಹೇರ್ ಸೆಟ್ಟಿಂಗ್, ಅನಂತಮೂರ್ತಿ ದಾಡಿ ಟ್ರಿಮ್ಮಿಂಗ್, ಗೋಕಾಕ್ ಫೇಸ್ ಮಸಾಜ್, ಮಾಸ್ಟರ್ ಹಿರಣ್ಣಯ್ಯ ಹೆಡ್ ಮಸಾಜ್ ಹೀಗೆ ವಿವಿಧ ಸಾಹಿತಿಗಳ ಶೈಲಿಯ ಕಟಿಂಗ್ ಮಾಡುತ್ತಿರುವುದು ವಿಶೇಷವಾಗಿದೆ.

ಸಾಮಾನ್ಯವಾಗಿ ಎಲ್ಲ ಸಲೂನ್‍ಗಳಲ್ಲಿ ಸಿನಿಮಾ ನಟರ ಕೇಶಾಲಂಕಾರದ ಚಿತ್ರಗಳನ್ನು ಹಾಕಲಾಗಿರುತ್ತದೆ. ಇದು ಕೇವಲ ಜನರನ್ನು ಸೆಳೆಯಲು ಮಾತ್ರ. ಆದರೆ ನಮ್ಮ ಕನ್ನಡದ ಶ್ರೀಮಂತಿಕೆಯನ್ನು ಇಂದಿನ ಯುವ ಜನತೆಗೆ ತಿಳಿಸಲು ಹಾಗೂ ಕನ್ನಡದ ಅಭಿಮಾನವನ್ನು ಮೆರೆಯಲು ವರ್ಷದ 365 ದಿನ ಕನ್ನಡ ರಾರಾಜಿಸುತ್ತಿರಲಿ ಎಂಬ ಬಯಕೆಯಂತೆ ಮತ್ತು ವಾಟಾಳ್ ನಾಗರಾಜ್ ಅವರ ಸ್ಪೂರ್ತಿಯಿಂದ ಈ ಕಾರ್ಯವನ್ನು ಕನ್ನಡದ ಸೇವೆಯನ್ನು ಮಾಡುತ್ತಾ ಕನ್ನಡ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನ ತಮ್ಮ ಅಂಗಡಿಯನ್ನು ಕನ್ನಡದ ಬಾವುಟಗಳಿಂದ ಸಿಂಗರಿಸುವುದಲ್ಲದೆ, ಅಂಗಡಿಗೆ ಬರುವ ಗ್ರಾಹಕರಿಗೆ ಸಿಹಿ ಹಂಚಿ ಕೆಲವು ಸಾಹಿತಿಗಳ ಪುಸ್ತಕಗಳನ್ನು ಓದಲು ನೀಡಿ ರಾಜ್ಯೋತ್ಸವವನ್ನು ಆಚರಿಸುವುದು ಇವರು ಪ್ರತಿವರ್ಷ ಮಾಡಿಕೊಂಡು ಬಂದ ಆಚರಣೆಯಾಗಿದೆ.

ಈ ಕುರಿತಂತೆ ಮಾತನಾಡಿರುವ ಸಲೂನ್ ಮಾಲೀಕ ಮಂಜುನಾಥ್ ಅವರು, ಕನ್ನಡದಲ್ಲಿ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕು ಎಂಬುದು ನನ್ನ ಬಯಕೆಯಾಗಿದೆ. ಕನ್ನಡ ಇಂದು ಮರೆಯಾಗುತ್ತಿದೆ. ಪ್ರತೀ ಮನೆಯಲ್ಲೂ ಕನ್ನಡ ಸದಾ ಜೀವಂತವಾಗಿರಬೇಕು. ಇಂದಿನ ಯುವ ಜನತೆಗೆ ನಾವು ಹಾಗೂ ಸರ್ಕಾರ ಕನ್ನಡದ ವೈಭವವನ್ನು ತಿಳಿಸುವ ಜೊತೆಗೆ ಉಳಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದಿದ್ದಾರೆ.

By admin