ಚಿದ್ರೂಪ ಅಂತಃಕರಣ
ವಾಲ್ಮೀಕಿ ಮಹರ್ಷಿಗಳ ಶ್ರೀಮದ್ರಾಮಾಯಣ ಮಾನವ ಸಮಾಜದ ವಿಕಸಿತ ಪ್ರಜ್ಞೆಯ ಶೋಧ. ಸದ್ಗತಿ ಅಥವಾ ದುರ್ಗತಿಗಳ ಸಮಯಕ್ಕೆ ಬರುವ ಯೋಚನೆಗಳ ಫಲವಾಗಿ ತೆಗೆದುಕೊಳ್ಳುವ ನಿರ್ಧಾರಗಳ ಒಂದು ಮುನ್ನೋಟ ಸಾಕ್ಷಿ ಈ ರಾಮಾಯಣ. ಮಾನವನ ಮನೋಸ್ಥರದ, ಬೌದ್ಧಿಕಸ್ಥರದ ಊರ್ಜಿತ ಅರ್ಥಬದ್ಧ ಬದಲಾವಣೆಗೆ ದುರಂತಗಳೇ ಗಹನವಾದ ಪಾಠ. ಈ ಪಾಠಗಳು ರಾಮಾಯಣವೆಂಬ ಮಹಾಕಾವ್ಯದಲ್ಲಿ ಏಳು ಕಾಂಡ(ಅಧ್ಯಾಯ)ಗಳಲ್ಲಿ ರೂಪುಗೊಂಡಿದೆ.
ಮೆತ್ತಗಿನ ಸ್ಪರ್ಶಕ್ಕಿಂತ ಸುಡುವ ಕಾವು; ಯಾರನ್ನೆ, ಯಾವುದನ್ನೆ ಆದರೂ ಬಹುಬೇಗ ಎಚ್ಚರಗೊಳಿಸುತ್ತದೆ. ರಾಮಾಯಣದೊಳಗಿನ ಮಾತು, ಯೋಚನೆ, ನಿರ್ಧಾರಗಳ ಸುಡುವ ಕಾವು ದಶರಥ, ಮಂಥರೆ, ಕೈಕೇಯಿ, ರಾಮ, ಸೀತಾ, ರಾವಣರ ಮುಖೇನ ಎಲ್ಲರನ್ನು, ಎಲ್ಲವನ್ನು ಜಾಗೃತ ಪ್ರಜ್ಞೆಗೆ ಸೆಳೆಯುವುದೇ ಆಗಿದೆ. ಶ್ರೀಕೃಷ್ಣ ಗೀತೋಪದೇಶದಲ್ಲಿ ಹೀಗೆಂದಿದ್ದಾನೆ; “ಸ್ವತಃ ದುಃಖದಲ್ಲೇ ಆಗಲಿ, ಸಂತೋಷದಲ್ಲೇ ಆಗಲಿ ಇದ್ದಾಗ ಯಾರಿಗೂ ‘ಮಾತು’ ಅಥವಾ ‘ಭರವಸೆ’ ನೀಡಬಾರದು”. ಈ ಮಾತು ಅಕ್ಷರಶಃ ಸತ್ಯವಿದು. ಎಂದೋ ರಣರಂಗದಲ್ಲಿ ಕೈಕೇಯಿ ಮಾಡಿದ ಸಹಾಯಕ್ಕೆ ಕೈಕೇಯಿಗೆ ದಶರಥ ನೀಡಿದ ‘ವರ’ ಅವನಿಗೇ ಧರ್ಮಸಂಕಟವನ್ನಿತ್ತಿತು. ಎಂದೋ ಮಾಡಿದ ಶ್ರವಣಕುಮಾರನ ಹತ್ಯೆಯೂ, ಶ್ರವಣಕುಮಾರನ ಮಾತಾ – ಪಿತರ ಶಾಪವೂ ರಾಜನಾದವನ ಬದುಕಿಗೂ ದುಃಖ ತಂದಿತ್ತು.
ಕುರೂಪಿ, ಸಕಲಜನ ದೂಷಿತ ಮಂಥರೆ ಮನೋಕುರೂಪಿಯು ಆಗಿ; ಕೈಕೇಯಿ ಮತ್ತು ಭರತನ ಮೇಲಿನ ಋಣವಾತ್ಸಲ್ಯಕ್ಕೆ ಕಟ್ಟುಬಿದ್ದು, ಅಯೋಧ್ಯೆ ಪುರಜನರ ಹೀಯಾಳಿಕೆಯ ಸೇಡಿನ ಪ್ರತಿಕಾರಕ್ಕೆ ಸಮಯವರಿತು ಕೈಕೇಯಿಯ ಕಿವಿಗೆ ಊಯ್ದ ಸವತಿಪುತ್ರ ಮತ್ಸರದ ವಿಷ ಯುಗಯುಗಕ್ಕೂ ಮಂಥರೆಯನ್ನು ಅಪರಾಧಿಯನ್ನಾಗಿಸಿತು. ಯಾರ ಮಕ್ಕಳೇ ಆಗಲಿ ಸಕಲರನ್ನು ತನ್ನ ಮಕ್ಕಳೆಂದೇ ಭಾವಿಸುವುದು ತಾಯಿಗಿರಬೇಕಾದ ಸೃಷ್ಟಿಯ ಸ್ವಾಭಾವಿಕ ಗುಣ. ಈ ಗುಣವನ್ನೇ ಕೊಂದುಕೊಂಡ ಕೈಕೇಯಿ ಭರತನ ಒಳಿತೆಂದೇ ಭಾವಿಸಿ ರಾಮನಿಗೆ ನೀಡಿದ ವನವಾಸದ ನಿರ್ಧಾರಶಿಕ್ಷೆ ಹೆತ್ತ ಮಗನಿಂದಲೇ “ಹೀನತನದವಳು ನೀನು, ತಾಯಿ ಸಂಕುಲಕ್ಕೇ ಕಳಂಕ ನೀನು, ಶಾಪ – ಮಹಾಪಾಪ ಎನಿಸಿದರೂ ಸರಿ, ನಾನೇ ಕೊಲ್ಲುವೆ ನಿನ್ನನ್ನು ತಾಯೆಂಬುದ ಮರೆತು ರಾಮ ಹಿಂದಿರುಗದಿದ್ದರೆ” ಎನಿಸಿಕೊಳ್ಳಬೇಕಾಯಿತು.
ಪುರುಷೋತ್ತಮ ರಾಮ ಸತಿಯ ಮೇಲಿನ ಪ್ರೇಮ ನಿಷ್ಠೆಗೆ ಒಳಗಾಗಿ, ರಾಕ್ಷಸರ ಮಾಯಾ ಪ್ರಪಂಚವೇ ಆದ ದಂಡಕಾರಣ್ಯದ ಆಪತ್ತನ್ನು ಅರಿತರೂ ಮುಂದಾಲೋಚನೆಯಿಲ್ಲದೆ ಮಾರೀಚನೆಂಬ ಮಾಯಾಮೃಗದ ಬೆನ್ನಟ್ಟಿದ ಪೆದ್ದತನದಿಂದಾಗಿ ಕಷ್ಟಕೋಟಲೆಗಳ ಲೋಕದೊಳ ಹೊಕ್ಕು ಶಕ್ತಿಯುತ ರಾಮ ಸ್ವತಃ ನರಳುವಂತಾಯ್ತು. ಸೀತೆಯನ್ನು ಲಂಕಾ ರಾಕ್ಷಸನಿಗೆ ಸುಲಭವಾಗಿ ಸೆರೆ ಸಿಕ್ಕಿಸಿದಂತಾಯ್ತು.
ಇನ್ನೋ ಸೀತಾ, ಅರವತ್ನಾಲ್ಕು ವಿದ್ಯೆಯನರಿತ ವಿದ್ಯಾಭೂಷಿತೆ. ಪತಿವ್ರತೆ ಶೀರೋಮಣಿ. ಐಹಿಕ ವೈರಾಗಿಯಾಗಿ ರಾಜ್ಯದ ಆಸೆ ತೊರೆದು ರಾಮನೊಟ್ಟಿಗೆ ಕಾಡಿಗೆ ಬಂದವಳು. ನಿಸರ್ಗದ ಸೌಂದರ್ಯಕ್ಕೆ ಮರುಳಾದ ಮರುಳೆಯಾಗಿ ಮಾಯಾಮೃಗದ ಆಸೆ ಹೊತ್ತು ರಾಮನನ್ನ ಛೇಡಿಸಿ ರಾಕ್ಷಸ ಮಾಯಾಮೃಗದ ಬೆನ್ನಟ್ಟಲು ಗಂಡನನ್ನು ಗೀಳಿಟ್ಟಿದ್ದು; ಸ್ವತಃ ಸೀತೆಯೇ “ನನ್ನಿಂದಾದ ಪ್ರಮಾದ”ವೆಂದು ಚಿಂತಿಸುವಂತಾಯ್ತು. ಜತೆಗೆ ಮರ್ಯಾದ ಪುರುಷ ರಾಮನ ಸೋದರ – ಲಕ್ಷ್ಮಣನನ್ನು ಸ್ವತಃ ತಾನೇ ರಾಮನಿಗೊದಗಿಸಿದ ಅಪಾಯದ ಆತಂಕದಲ್ಲಿ “ಇದಕ್ಕೆಲ್ಲ ನೀನೇ ಕಾರಣ ಲಕ್ಷ್ಮಣ. ಮಾಯಾಮೃಗವನ್ನು ಸೃಷ್ಟಿಸಿ ನನ್ನಿಂದಲೇ ನಿನ್ನಣ್ಣನನ್ನು ಈ ಮಾಯಾ ರಾಕ್ಷಸರ ಅಪಾಯಕ್ಕೆ ಸಿಲುಕಿಸಿ, ಒಂಟಿಯಾದ ಅತ್ತಿಗೆಯನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿರುವೆಯಾ? ಇದೆಲ್ಲಾ ನಿನ್ನದೇ ಕುತಂತ್ರ” ಎಂದು ಅನುಮಾನಿಸಿ, ಅಪಮಾನಿಸಿ, ನಿಂದಿಸಿ ರಕ್ಷಣೆಗಿದ್ದ ಲಕ್ಷ್ಮಣನನ್ನು ರಾಮನ ಹಿಂದೆಯೇ ಕಳುಹಿಸಿದ್ದು ಮರು ಚಿಂತಿಸುವಂತಾಯ್ತು. ಸಾಲು ಸಾಲು ಎಡರು ತೊಡರುಗಳಲ್ಲಿ ನೊಂದು ಎಚ್ಚೆತ್ತರೂ ಲಕ್ಷ್ಮಣರೇಖೆಯನ್ನು ದಾಟಿ ರಾವಣನ ಅಪಹರಣವಾದಳು ಸೀತಾ.
ಶಿವತಾಂಡವ ಸ್ತೋತ್ರವನ್ನು ರಚಿಸಿದ ಮಹಾಶಿವಭಕ್ತ ರಾವಣ; ಭಕ್ತಿಯ ಪರಾಕಾಷ್ಠೆಯಲ್ಲಾಗಲಿ, ಜ್ಞಾನ ವಿದ್ವತ್ತಿನಲ್ಲಾಗಲಿ, ರಾಜಕೀಯ ಧುರೀಣತೆಯಲ್ಲಾಗಲಿ, ಕ್ಷತ್ರಿಯಬಲದಲ್ಲಾಗಲಿ, ಕಲೆ ಮತ್ತು ಸಂಸ್ಕೃತಿಯ ಪೋಷಣೆಯಲ್ಲಾಗಲಿ, ತಪಸ್ಸಿನ ಹಠಸಾಧನೆಯಲ್ಲಾಗಲಿ ಪ್ರಚಂಡ ಸಾಧಕನು. ಇಷ್ಟೆಲ್ಲಾ ಸದ್ಗುಣಶೀಲ ದಶಶಿರ ಶಕ್ತಿಬಲನು ಪರಸ್ತ್ತೀ ವ್ಯಾಮೋಹ, ಕ್ರೋಧ, ಅಹಂಕಾರದ ದುರ್ಗುಣಗಳಿಂದ ಖಳನಾಯಕನಾದ. ಶೂರ್ಪನಖಿಯು ರಾಮನ ತಾತ್ಸಾರಕ್ಕೆ ಮತ್ಸರಗೊಂಡು ರಾವಣನನ್ನು ಎತ್ತಿಕ್ಕಟ್ಟಿದಳು ಸೋದರಿ ರಾಕ್ಷಸಿ. ಶಕ್ತಿಯೆಂಬುವುದು ಯುಕ್ತಿಯ ಜತೆಗಿರಬೇಕು; ಅಹಂಕಾರದ ಜತೆಗಲ್ಲ. ವೇದಪಾರಂಗತ ಬುದ್ಧಿರ್ಬಲನಾದ ರಾವಣ ಅಹಂಕಾರದಿಂದ ತಂಗಿಯ ಮಾತಿಗೆ ಕುದಿದು ಸೀತಾಪರಣಗೈದು ರಾಮನನ್ನು ಎದುರುಗೊಂಡ. ಮಕ್ಕಳಾದಿಯಾಗಿ ತನ್ನ ಸರ್ವಸ್ವವನ್ನೂ ಕಪಿಸೈನ್ಯದಿಂದ ಕಳೆದುಕೊಂಡು ಯುದ್ಧಭೂಮಿಯಲ್ಲಿ ಘೋರವಾಗಿ ರಾಮನಿಂದ ಹತನಾದನು.
ಹೀಗಾಗಿ ಮಂಥರೆ, ಕೈಕೇಯಿ, ದಶರಥ, ರಾಮ, ಸೀತಾ, ರಾವಣ, ಶೂರ್ಪನಖಿ ಒಂದಲ್ಲ ಒಂದು ಕಾರಣಕ್ಕೆ ತಮ್ಮ ತನಗಳನ್ನು ಬದಲಿ ನಡೆದಿದ್ದಕ್ಕೆ, ನುಡಿದಿದ್ದಕ್ಕೆ ವಿಧಿಲಿಖಿತದೊಳಗೆ ನಿಧಿಪಾಠವಾದರು. ಸೀತಾ ಅಪಹರಣಕ್ಕೆ ಪ್ರತ್ಯಕ್ಷ, ಪರೋಕ್ಷ ಕಾರಣರಾದರು.
ರಾಮಾಯಣದಲ್ಲಿ ರಾವಣನ ಸೋದರ ವಿಭೀಷಣನ ಪಾತ್ರ ತುಂಬಾ ವಿಶೇಷವಾದದ್ದು. “ಧರ್ಮದಲ್ಲಿ ನಡೆವವನಿಗೆ ಅಧರ್ಮವೆಂದೂ ಎದುರಾಗದು” ಮತ್ತು “ಅಧರ್ಮದ ನಡೆಯಲ್ಲಿ ಯಾರೇ ಇದ್ದರು ಅವರೊಟ್ಟಿಗಿರಬಾರದು” ಇಲ್ಲಿ ವಿಭೀಷಣ ಈಗಾಗಲೇ ಸೀತಾಪಹರಣ ವಿಷಯವಾಗಿ ಸೋದರ ರಾವಣನಿಗೆ ತಿಳಿ ಹೇಳಲಾರಂಭಿಸಿದ್ದ. ಮಾಡಿದ ತಪ್ಪಿಗೆ ರಾಮನಲ್ಲಿ ಕ್ಷಮೆಯಾಚಿಸಿ ಧರ್ಮದೆಡೆ ಇರು ಎಂದಿದ್ದ. ಅಹಂಕಾರಿ ರಾವಣ ಒಪ್ಪದಿದ್ದಾಗ ರಾಮನಪರ ಸೇರಲು ಅರೆಕ್ಷಣವೂ ಯೋಚಿಸಲಿಲ್ಲ ವಿಭೀಷಣ. ಅಂತೆಯೇ ರಕ್ಕಸ ಕುಲದಲ್ಲಿ ಜನ್ಮ ಪಡೆದರೂ ಶಿಷ್ಟಾಚಾರಗಳನ್ನು ಮೈಗೂಡಿಸಿಕೊಂಡು; ಅಂತಿಮದವರೆಗೂ ಧರ್ಮದ ನೆಲೆಯಲ್ಲಿ ನಿಂತು ಯುಗಯುಗಕ್ಕೂ ಮಾದರಿಯಾದ ವಿಭೀಷಣ.
ಇನ್ನೂ ಅನೇಕಾನೇಕ ಪಾತ್ರಗಳು ರಾಮಾಯಣದಲ್ಲಿ ಮುಖ್ಯ ಧ್ವನಿಗಳಾಗಿವೆ. ಇಲ್ಲಿರುವ ಎಲ್ಲಾ ಪಾತ್ರಗಳು ಮಾನವನ ಮನೋತಲದಲ್ಲಿ ಭಾವ ಕವಲುಗಳಾಗಿ ರೂಪುಗೊಂಡಿವೆ. ಸನ್ನಿವೇಶಗಳಿಗೆ ಜೀವಾಡುತ್ತಲೇ ಇವೆ. ಲೇಖನದ ಕೊನೆಯ ಸಾಲು ಪ್ರಸ್ತುತಕ್ಕೆ. ಶಿವನನ್ನು ಮೆಚ್ಚಿಸಿ ಶ್ರೇಷ್ಠನಾಗಿದ್ದ ರಾವಣ ಇಂದಿಗೂ ಕೆಲವರಲ್ಲಿ ಇದ್ದಾನೆ. ಶಿವನ ಮುಂದಿರಿಸಿ ಅಧರ್ಮವೆಸಗುತ್ತಿದ್ದಾನೆ. ಸ್ರ್ತೀದೋಷದಲ್ಲಿದ್ದ ಅಂದಿನ ರಾವಣನಿಗೂ ಶಿವ ಒದಗಲಿಲ್ಲ; ಇಂದಿನ ಸ್ತ್ರೀಹತ್ಯಾ ಅಧರ್ಮ ರಾವಣರಿಗೂ ಶಿವ ಒದಗುವುದಿಲ್ಲ. ನ್ಯಾಯವೆಂಬ ರಾಮಶಕ್ತಿಯಿಂದ ಇಂದಿನ ರಾವಣರು ವಧೆಯಾಗುವುದು ನಿಶ್ಚಿತ.

ಮಂಜುನಾಥ ಬಿ.ಆರ್(ಚಿ.ಮ.ಬಿ.ಆರ್)
ಲೇಖಕರು, ಎಚ್.ಡಿ.ಕೋಟೆ, ಮೈಸೂರು.
ದೂ.ಸಂ : 8884684726
Gmail I’d : manjunathabr709@gmail.com