ಗುಂಡ್ಲುಪೇಟೆ: ಟೊಮೊಟೊ ಬಾಕ್ಸ್ ನೊಳಗೆ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಇರಿಸಿಕೊಂಡು ಜೀಪ್‍ನಲ್ಲಿ ತಮಿಳುನಾಡು ಕಡೆಗೆ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಗಫೂರ್ ಬಂಧಿತ. ಈತ ಪಟ್ಟಣ ಹೊರ ವಲಯದ ತೋಟವೊಂದರ ಶೆಡ್‍ನಲ್ಲಿ ಟೊಮೊಟೊ ಬಾಕ್ಸ್‍ಗಳ ನಡುವೆ ಮದ್ಯದ ಬಾಟಲಿಗಳನ್ನಿಟ್ಟು ತಮಿಳುನಾಡಿನ ಮೂಲಕ ಕೇರಳಕ್ಕೆ ಸಾಗಣೆ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಬಿಸಿಎಂ ಹಾಸ್ಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ-67 ರಲ್ಲಿ ತಡೆದು ಪರಿಶೀಲಿಸಿದಾಗ ಟೊಮೆಟೊ ಬಾಕ್ಸ್‍ಗಳ ನಡುವೆ ಮದ್ಯದ ಬಾಟಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ನಂತರ ಆರೋಪಿ ಬಂಧಿಸಿ, ವಾಹನ ವಶಪಡಿಸಿಕೊಂಡಿದ್ದಾರೆ.
ಠಾಣೆಯಲ್ಲಿ ವಾಹನ ಪರಿಶೀಲಿಸಿದಾಗ ದುಬಾರಿ ಬೆಲೆಯ ಬ್ಯಾಗ್ ಪೈಪರ್(ಬಿಪಿ), 8 ಪಿಎಂ, ಒರಿಜಿನಲ್ ಚಾಯ್ಸ್(ಒಸಿ), ಬಿಜಾಯ್ಸ್ ಕಂಪನಿಯ 45 ಸಾವಿರ ಬೆಲೆ ಬಾಳುವ 147 ಮದ್ಯದ ಬಾಟಲಿ ಪತ್ತೆಯಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಎಎಸ್‍ಪಿ ಅನಿತಹದ್ದಣ್ಣವರ, ಡಿಎಸ್‍ಪಿ ಪ್ರಿಯದರ್ಶಿನಿ ಸಾಣೆ ಕೊಪ್ಪ ನೇತೃತ್ವದಲ್ಲಿ ಪಿಐ ಎಸ್.ಮಹದೇವಸ್ವಾಮಿ, ಪಿಎಸ್‍ಐ ಜೆ.ರಾಜೇಂದ್ರ ನಡೆಸಿದ ಕಾರ್ಯಾಚರಣೆಯಲ್ಲಿ ನೌಕರರಾದ ಎಸ್.ಮಹೇಶ್, ಎಚ್.ಪಿ.ಶಿವನಂಜಪ್ಪ, ಯೋಗೇಶ್, ವಾಸುನಾಯಕ, ವಿನೋದ್‍ಕುಮಾರ್, ಜಯಕುಮಾರ್, ಉಡಿಗಾಲಜಗದೀಶ್, ದಿವಾಕರ, ಮಹೇಶ್, ತೆರಕಣಾಂಬಿ ಶ್ರೀನಿವಾಸನಾಯಕ ಭಾಗವಹಿಸಿದ್ದರು.