ಮೈಸೂರು: ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು, ಆಕ್ಸಿಜೆನ್ ಸಹಿತ ಅಂಬ್ಯೂಲೆನ್ಸ್ ಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸುವುದು, ಆರೋಗ್ಯ ಕೇಂದ್ರ ಇರದ ಗ್ರಾಮಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುವುದು, 18 ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲು ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳ ಬೇಡಿಕೆಗೆ ಆಗ್ರಹಿಸಿ ಎಐಡಿವೈಓ ಗ್ರಾಮ ಘಟಕದ ವತಿಯಿಂದ ಗ್ರಾಪಮ ಪಿಡಿಓ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ಜಿಲ್ಲೆಯ ಅಣ್ಣೂರು ಗ್ರಾಮ ಪಂಚಾಯಿತಿ ಎಐಡಿವೈಓ ಗ್ರಾಮ ಘಟಕದ ವತಿಯಿಂದ ಅಣ್ಣೂರು ಗ್ರಾಮ ಪಂಚಾಯಿತಿ ಎದುರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್ ಜಯರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು ಅದರಂತೆ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ಥಳೀಯ ಗ್ರಾಪಂ ಪಿಡಿಓ ಗೆ ಮನವಿ ಸಲ್ಲಿಸಲಾಗಿದೆ.
ಮನವಿ ಪತ್ರದಲ್ಲಿ ರಾಜ್ಯಾದ್ಯಂ ತ ಕೋವಿಡ್-19 ರೋಗವು ಉಲ್ಬಣಿಸಿ ಸಾಕಷ್ಟು ಜೀವಗಳನ್ನು ಬಲಿ ಪಡೆದಿದೆ. ಕಳೆದ 15 ದಿನಗಳಿಂದ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಈ ರೋಗದ ಪ್ರಕರಣಗಳು ಹೆಚ್ಚಿಗೆ ಕಾಣಿಸಿಕೊಂಡದ್ದು ಎಲ್ಲರನ್ನು ಆತಂಕಕ್ಕೀಡು ಮಾಡಿದೆ. ಎರಡನೇ ಅಲೆಗೆ ತಜ್ಞರ ಮುನ್ನೆಚ್ಚರಿಕೆಯಂತೆ ಸೂಕ್ತ ಮುಂಜಾಗ್ರತೆ ವಹಿಸಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಈಗಾಗಲೇ ಪ್ರಮುಖವಾಗಿ ಗ್ರಾಮೀಣಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಹೆಚ್ಚಿದ್ದು, ಹಳ್ಳಿಯ ಜನತೆ ಪರದಾಡುವಂತಾಗಿದೆ. ಸೊಂಕಿತರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತ್ಯೇಕವಾಗಿರಲು ಹಳ್ಳಿ ಮನೆಗಳಲ್ಲಿ ಸೌಲಭ್ಯಗಳ ಲಭ್ಯತೆ ಇರುವುದಿಲ್ಲ. ಆದ್ದರಿಂದ ರೋಗಿಗಳಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಗ್ರಹಿಸಲಾಗಿದೆ.
ಗ್ರಾಮದ ಮುಖಂಡರನ್ನು ಒಳಗೊಂಡು ಗ್ರಾಮೀಣ ಟಾಸ್ಕ್ ಫೋರ್ಸ್ ಸಮಿತಿಯ ಸಭೆಗಳನ್ನು ನಡೆಸಬೇಕು. ಹೆಚ್ಚಿನ ಸಂಖ್ಯೆಯ ಬಡರೈತರು ಆದಾಯದ ಕೊರತೆಯಿಂದಾಗಿ ಸರ್ಕಾರಿ ವೈದ್ಯಕೀಯ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಇನ್ನೊಂದೆಡೆ ಗಾಮೀಣ ಭಾಗದಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬಿಬ್ಬರು ಸಿಬ್ಬಂದಿಯೇ ಲಭ್ಯವಿದ್ದಾರೆ. ಅವಶ್ಯಕ ಔಷಧಿಗಳು ರೋಗಿಗಳಿಗೆ ಸಕಾಲಕ್ಕೆ ಸಿಗುವಂತಾಗಬೇಕು. ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸಿ, ಕೂಡಲೇ ಪಲಿತಾಂಶ ನೀಡಬೇಕು ಲಸಿಕೆ ಕಾರ್ಯಕ್ರಮವನ್ನು ಹೆಚ್ಚಿಸಬೇಕು.
ಇನ್ನು 2ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜೆನ್ ಬೆಡ್, ಐಸಿಯುಗಳ ಹೆಚ್ಚಿನ ಲಭ್ಯತೆ ಆಗಬೇಕು. ಈಗ ಬಸ್‌ಗಳು ಇಲ್ಲ ಹಾಗೂ ಹಳ್ಳಿಗಳಲ್ಲಿ ಸಾರಿಗೆ ಸಂಪರ್ಕದ ತೊಂದರೆಗೆ ಪರ್ಯಾಯವಾಗಿ ಗಂಭೀರ ರೋಗಿಗಳನ್ನು ಸಾಗಿಸಲು ಮೋಬೈಲ್ ಆಕ್ಸಿಜೆನ್ ವಾಹನಗಳು ಹಾಗೂ ತೀವ್ರ ನಿಗಾ ಸೌಲಭ್ಯವಿರುವ ಅಂಬ್ಯುಲೆನ್ಸ್‌ಗಳನ್ನು ಒದಗಿಸಬೇಕು.ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಲಭ್ಯವಿರುವ ಶಾಲೆಗಳು, ಸಮುದಾಯ ಭವನ, ಹಾಸ್ಟೆಲ್, ವಸತಿಗಳನ್ನು ಆರೈಕೆ ಕೇಂದ್ರಗಳಾಗಿ ಬಳಸಿಕೊಂಡು ಜನಗಳು ಬಂದು ಇರುವಂತೆ ಯೋಗ್ಯ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಆದ್ದರಿಂದ ಈ ಕೋವಿಡ್ 2 ನೇ ಅಲೆಯನ್ನು ನಿಯಂತ್ರಿಸಲು ಹಾಗೂ ಮೂರನೇ ಅಲೆಯ ಭೀತಿಯಿಂದ ರಕ್ಷಿಸಿಕೊಳ್ಳಲು ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.