ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಆಯೋಜಿಸಿದ್ದ ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ ಜಾಗೃತಿ ಜಾಥಾಗೆ ಅಧ್ಯಕ್ಷ ದಯಾನಂದ ಸ್ವಾಮೀಜಿ ಚಾಲನೆ ನೀಡಿದರು. ವೃತ್ತ ನಿರೀಕ್ಷಕ ಎನ್.ಆನಂದ್, ಉಪ ಆರಕ್ಷಕ ನಿರೀಕ್ಷಕ ಶ್ರವಣದಾಸ್ ರೆಡ್ಡಿ ಹಾಜರಿದ್ದರು.
ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಜಾತ್ರೆ, ತೆರಣಿಮುಂಟಿ ಜಾತ್ರೆ ಸೇರಿದಂತೆ ಇನ್ನಿತರ ಗ್ರಾಮದಲ್ಲಿ ನಡೆಯುವ ಹಬ್ಬ-ಹರಿದಿನಗಳಲ್ಲಿ ದೇವರ ಹೆಸರಿನಲ್ಲಿನ ಪ್ರಾಣಿಬಲಿ ಕಡ್ಡಾಯವಾಗಿ ನಿಷೇಧಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ನ್ಯಾಯಾಲಯ ೩ರಿಂದ ೭ ವರ್ಷ ಜೈಲು, ೫೦ರಿಂದ ೭೦ ಸಾವಿರ ದಂಡ ವಿಧಿಸಲಾಗುವುದು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಆಯೋಜಿಸಿದ್ದ ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಉಚ್ಚ ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಪ್ರಾಣಿ ಬಲಿ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಬಲಿಗೆಂದು ಮೀಸಲಿರಿಸಿದ ಪ್ರಾಣಿಗಳನ್ನು ಜಿಲ್ಲಾಡಳಿತ ಮುಂಜಾಗೃತಕ್ರಮವಾಗಿ ತಮ್ಮ ವಶಕ್ಕೆ ಪಡೆದು ಅವುಗಳ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಸಾಗರೆ ಗ್ರಾಮದಲ್ಲಿ ಮಾರಮ್ಮನ ಜಾತ್ರೆ, ಯುಗಾದಿ ಹಬ್ಬದ ದಿನದಂದು ನಡೆಯುವ ಚಿಕ್ಕದೇವಮ್ಮನ ಹಾಲುಗಡ ಜಾತ್ರೆ, ತೆರಣಿಮುಂಟಿ ಜಾತ್ರೆಗಳಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಬೇಕು. ರಾಜ್ಯದಲ್ಲಿ ಎಲ್ಲಿಯೇ ಪ್ರಾಣಿ ಬಲಿ ನಡೆಯುವುದು ಕಂಡು ಬಂದರೆ ಪ್ರಾಣಿ ಬಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾದಲ್ಲಿ ಆ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ವ್ಯಾಪಕ ಮುಂಜಾಗೃತಾ ಪ್ರಚಾರ, ಬಂದೋಬಸ್ತ್‌ನ್ನು ಕೈಗೊಳ್ಳಬಹುದು. ಹೀಗಾಗಿ ಎಲ್ಲಿಯೂ ಪ್ರಾಣಿಬಲಿ ಮಾಡಬಾರದೆಂದು ಅವರು ಹೇಳಿದರು.
೧೩ ವರ್ಷದೊಳಗಿನ ಕೊಣ, ಎಮ್ಮೆ ಮತ್ತು ಅವುಗಳ ಕರುಗಳನ್ನು ಎಲ್ಲಿಯೂ ಹತ್ಯೆ ಮಾಡುವಂತಿಲ್ಲ. ಕೋಣ, ಇನ್ನಿತರ ಪ್ರಾಣಿಗಳನ್ನು ಗೋವಂಶಾದಿ ಜಾನುವಾರುಗಳನ್ನು ಆಹಾರಕ್ಕಾಗಲೀ, ದೇವರ ಹೆಸರಿನಲ್ಲಾಗಲೀ ಹತ್ಯೆ ಮಾಡುವುದನ್ನು ತಡೆಗಟ್ಟಬೇಕೆಂದು ಸರಕಾರ, ಪೊಲೀಸ್ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯನ್ನು ಮುಂದಾಗಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದರು.
ತಾಲೂಕು ವೃತ್ತ ನಿರೀಕ್ಷಕ ಎನ್.ಆನಂದ್, ಉಪ ಆರಕ್ಷಕ ನಿರೀಕ್ಷಕ ಶ್ರವಣದಾಸ್ ರೆಡ್ಡಿ, ಸಿಬ್ಬಂದಿಗಳಾದ ರಮೇಶ್, ಶಿವಕುಮಾರ್, ಶಿವಪ್ಪ, ಅಭಿ ಹಾಜರಿದ್ದರು.