ಗುಂಡ್ಲುಪೇಟೆ: ಸಾಮಾನ್ಯವಾಗಿ ಪಟ್ಟಣ ಪ್ರದೇಶದಲ್ಲಿರುವ ಬಡವರಿಗೆ ಆಹಾರದ ಕಿಟ್ ಗಳನ್ನು ನೀಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಅದರಲ್ಲೂ ಕಾಡಂಚಿನ ಪ್ರದೇಶಗಳಿಗೆ ದಾನಿಗಳು ತೆರಳದ ಕಾರಣದಿಂದಾಗಿ ಇಲ್ಲಿನ ನಿರ್ಗತಿಕರು ಸಂಕಷ್ಟ ಅನುಭವಿಸುವಂತಾಗಿದೆ. ಇದನ್ನು ಅರಿತ ಗುಡ್ ನೈಬರ್ ಇಂಡಿಯಾ ಸಂಸ್ಥೆಯು ಬಂಡೀಪುರದ ಕಾಡಂಚಿನ ಬುಡಕಟ್ಟು ಹಾಡಿಗಳಿಗೆ ತೆರಳಿ ದಿನಸಿ ಸಾಮಾಗ್ರಿಗಳ ಕಿಟ್ ನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದೆ.
ಬಂಡೀಪುರ ಕಾಡಂಚಿನ ಗ್ರಾಮವಾದ ಕಾರೇಮಾಳದಲ್ಲಿ ಸಾಂಕೇತಿಕವಾಗಿ ೭೦ ವಿದ್ಯಾರ್ಥಿಗಳ ಕುಟುಂಬಗಳಿಗೆ ಅಕ್ಕಿ, ರಾಗಿ, ಬೇಳೆ, ಸಕ್ಕರೆ, ಉಪ್ಪು, ಎಣ್ಣೆ ಸೇರಿದಂತೆ ಸಾಂಬಾರ್ ಪದಾರ್ಥ ಒಳಗೊಂಡ ದಿನಸಿ ಸಾಮಾಗ್ರಿ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಈಶ್ವರ್ ಅವರು ಗುಡ್ ನೈಬರ್ ಇಂಡಿಯಾ ಸಂಸ್ಥೆ ವತಿಯಿಂದ ಕಾಡಂಚಿನ ಕಣಿಯನಪುರ ಕಾಲೋನಿ, ಹಾಡಿ ಕಣಿವೆ, ಚಿಕ್ಕ ಎಲಚೆಟ್ಟಿ, ಚನ್ನಿಕಟ್ಟೆ, ಲೊಕ್ಕೆರೆ, ಆನಂಜಿಹುಂಡಿ, ಬುರುದಾರ ಹುಂಡಿ, ಚಲುವರಾಯನ ಪುರ, ಗುಡ್ಡಗೆರೆ ಸೇರಿದಂತೆ ಇತರೆ ಹಲವು ಕಾಲೋನಿಯ ಸುಮಾರು ೩೬೦ ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಿಸಲಾಗುವುದು ಎಂದು ತಿಳಿಸಿದರು.
ಕೊರೊನಾ ೨ನೇ ಅಲೆಯಲ್ಲಿ ಕಾಡಂಚಿನ ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಯಾವುದೇ ರೀತಿಯ ಕೆಲವಿಲ್ಲದೆ ಮನೆಯಲ್ಲೆ ಕುಳಿತಿದ್ದು, ಊಟಕ್ಕುಕ್ಕೂ ಪರದಾಡುವ ಸ್ಥಿತಿ ಇದೆ. ಇದನ್ನು ಮನಗಂಡು ಗುಡ್ ನೈಬರ್ ಸಂಸ್ಥೆ ವತಿಯಿಂದ ಸುಮಾರು ೩೬೦ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಕಾಲೋನಿಯ ಜನರಿಗೆ ಕೊರೊನಾ ಸೋಂಕು ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗುಡ್ ನೈಬರ್ ಇಂಡಿಯಾ ಸಂಸ್ಥೆಯ ಸುನಿಲ್ ಕುಮಾರ್, ಕುಸುಮ, ಮಮತಾ, ಆರೋಗ್ಯ ಇಲಾಖೆಯ ಮಗೇಶ್ ಸೇರಿದಂತೆ ಹಲವರು ಹಾಜರಿದ್ದರು.