ಚಾಮರಾಜನಗರ, ಏಪ್ರಿಲ್ ೧೩ (ಕರ್ನಾಟಕ ವಾರ್ತೆ):- ೨೦೨೨ನೇ ಸಾಲಿನಲ್ಲಿ ಅವಧಿ ಮುಕ್ತಾಯವಾಗಿರುವ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಸಂಬಂಧ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಬರುವ ೧೧ ಕೃಷಿಕ ಕ್ಷೇತ್ರ ಮತ್ತು ೦೧ ವರ್ತಕರ ಕ್ಷೇತ್ರಗಳಿಗೆ ಏಪ್ರಿಲ್ ೧೭ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ.
ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ೨೮ ಅಭ್ಯರ್ಥಿಗಳು ಹಾಗೂ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ ೨೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳು ಒಳಪಡಲಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೩೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಒಟ್ಟು ೧,೪೯,೬೬೫ ಮತದಾರರಿದ್ದು, ಈ ಪೈಕಿ ೧,೧೧,೬೩೬ ಪುರುಷರು ಮತ್ತು ೩೮,೦೨೯ ಮಹಿಳಾ ಮತದಾರರಿರುತ್ತಾರೆ.
ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ, ೬೧ ಮೂಲ ಹಾಗೂ ೪ ಆಕ್ಸಿಲರಿ ಮತಗಟ್ಟೆಗಳನ್ನೊಳಗೊಂಡಂತೆ ಒಟ್ಟು ೬೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೭೨,೮೪೦ ಮತದಾರರಿದ್ದು, ಈ ಪೈಕಿ ೫೪,೩೨೧ ಪುರುಷರು ಮತ್ತು ೧೮,೫೧೯ ಮಹಿಳಾ ಮತದಾರರಿರುತ್ತಾರೆ.
ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ, ಯೂನಿವರ್ಸಲ್ ಸ್ಕೂಲ್, ಸತ್ತಿರಸ್ತೆ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ, ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು, ಗುಂಡ್ಲುಪೇಟೆ ಇಲ್ಲಿ ಮಸ್ಟರಿಂಗ್, ಡೀಮಸ್ಟರಿಂಗ್ ಮತ್ತು ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ.
ಮತಗಟ್ಟೆಗಳಿಗೆ ತಲಾ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು ೩ ಜನ ಪೋಲಿಂಗ್ ಅಧಿಕಾರಿಗಳನ್ನೊಳಗೊಂಡಂತೆ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೬೦೦ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೨೮೦ ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮತದಾನ ನಡೆಸುವ ಕುರಿತು ತಾಲ್ಲೂಕು ಮಟ್ಟದ ನುರಿತ ಮಾಸ್ಟರ್ ಟ್ರೈನರ್‍ಸ್‌ಗಳ ಮೂಲಕ ತರಬೇತಿಯನ್ನು ನೀಡಲಾಗಿರುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯನ್ನು ಮತಪೆಟ್ಟಿಗೆ ಬಳಸಿ ನಡೆಸಲಾಗುತ್ತಿರುವುದರಿಂದ, ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೨೭೦ ಹಾಗೂ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೧೩೦ ರಾಜ್ಯ ಚುನಾವಣಾ ಆಯೋಗದ ಮತಪೆಟ್ಟಿಗೆಗಳನ್ನು ಮತದಾನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಮತಗಟ್ಟೆಗಳಿಗೆ ನೇಮಕ ಮಾಡಿರುವ ಮತದಾನಾಧಿಕಾರಿಗಳನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಚಾಮರಾಜನಗರಕ್ಕೆ ೧೯ ಮತ್ತು ಗುಂಡ್ಲುಪೇಟೆಗೆ ೯ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ಹಾಗೂ ಕ್ರಮವಾಗಿ ೧೦ ಮತ್ತು ೮ ಜೀಪ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಏಪ್ರಿಲ್ ೧೭ರ ಭಾನುವಾರದಂದು ನಡೆಯುವ ಚುನಾವಣೆಯಲ್ಲಿ ಒಬ್ಬ ಮತದಾರರು ಒಂದು ಮತ ಚಲಾಯಿಸಲು ಮಾತ್ರ ಅವಕಾಶವಿರುತ್ತದೆ.
ಏಪ್ರಿಲ್ ೨೦ರಂದು ಬೆಳಿಗ್ಗೆ ೮ ಗಂಟೆಯಿಂದ ಮತ ಎಣಿಕೆ ಕಾರ್ಯವು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಎಣಿಕೆ ಕೇಂದ್ರದಲ್ಲಿ ನಡೆಯಲಿದ್ದು, ಪ್ರತಿ ಕ್ಷೇತ್ರಕ್ಕೆ ತಲಾ ಒಂದು ಟೇಬಲ್‌ನಂತೆ ಒಟ್ಟು ೧೨ ಟೇಬಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಎಣಿಕೆ ಕಾರ್ಯಕ್ಕಾಗಿ ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು ಮತ್ತು ಇಬ್ಬರು ಸಹಾಯಕರನ್ನು ನಿಯೋಜಿಸಿಕೊಂಡು ತರಬೇತಿ ನೀಡಲಾಗುತ್ತದೆ.
ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
