ಗುಂಡ್ಲುಪೇಟೆ: ಕನಕದಾಸರ ಕೀರ್ತನೆಗಳನ್ನು ಪ್ರತಿಯೊಬ್ಬರು ಅರಿತು, ಅವರ ತತ್ವ ಸಿದ್ದಾಂತಗಳನ್ನು ಪಾಲನೆ ಮಾಡಬೇಕೆಂದು ಶಾಸಕ ಸಿ.ಎಸ್. ನಿರಂಜನಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಕೀರ್ತನೆಗಳ ಮೂಲಕ ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ ಎಂದರು.

ಕನಕಸಾಸರು ದಾಸ ಸಾಹಿತ್ಯಕ್ಕೆ ವೈಶಿಷ್ಟ ಪೂರ್ಣವಾದ ಮೆರುಗು ತಂದಿದ್ದು, ಸಹಜ ಬದುಕಿನಿಂದ ಕೀರ್ತನರಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಮಾತಿದೆ ಎಂದು ತಿಳಿಸಿದರು.

ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೇ ಹದಿನಾರನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಮಡಿವಂತಿಕೆಯನ್ನು ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ. ಅಂದಿನ ಸಮಾಜದ ಸ್ಥಿತಿಗತಿಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ನಂಜುಂಡಯ್ಯ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಎಲ್. ಸುರೇಶ್, ನಾಗೇಶ್, ಬಸವರಾಜು, ಯುವ ಮೋರ್ಚ ಅಧ್ಯಕ್ಷ ಪ್ರಣಯ್, ಬಸವರಾಜು, ಮಹದೇವಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin