ಸೇವಾದಳ ಜಿಲ್ಲಾ ಕಚೇರಿಯಲ್ಲಿ ಬಸವಜಯಂತಿ ಆಚರಣೆ
ಚಾಮರಾಜನಗರ: ನಗರದ ಸೇವಾದಳ ಜಿಲ್ಲಾಕಚೇರಿಯಲ್ಲಿ ಜಗಜ್ಯೋತಿಬಸವೇಶ್ವರ ೮೮೯ ನೇ ಜಯಂತಿಯನ್ನು ಆಚರಿಸಲಾಯಿತು.
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಸೇವಾದಳ ಜಿಲ್ಲಾ ಸಮಿತಿ ಉಪಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ(ಬಾಬು) ಮಾತನಾಡಿ, ಬಸವಣ್ಣನವರು ೧೨ ನೇ ಶತಮಾನದಲ್ಲಿ ಸಮಾಜದ ಎಲ್ಲ ವರ್ಗದವರಲ್ಲೂ ಸಮಾನತೆ ತರುವ ಮೂಲಕ ವಿಶ್ವಗುರುವಾದರು. ಇಂದು ನಮ್ಮ ದೇಶ ಬಸವಣ್ಣನವರ ವಿಶ್ವಗುರು ಸ್ಥಾನಪಡೆಯುವತ್ತ ದಾಪುಗಾಲು ಹಾಕುತ್ತಿದೆ. ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ಸೇವಾದಳ ಜಿಲ್ಲಾಕೇಂದ್ರ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವಣ್ಣನವರು ಅನುಭವಮಂಟಪ ಸ್ಥಾಪಿಸಿ, ಸಮಾಜದ ಎಲ್ಲ ಸ್ಥರದ ಜನರನ್ನು ಒಂದುಗೂಡಿಸಿದರು ಎಂದರು.
ಭಾರತಸೇವಾದಳ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಮನುಷ್ಯನಿಗೆ ಬದುಕಲು ಕಾಯಕ ಮುಖ್ಯ, ಕಾಯಕದಿಂದ ಬಂದ ಆದಾಯವೇ ಪ್ರಸಾದ ಮೂಲವಾಗಬೇಕು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಬಸವಣ್ಣ ಕಾಯಕತತ್ವದ ಹರಿಕಾರ ಎಂದರು.
ತಾಲೂಕು ಸೇವಾದಳ ಕಾರ್ಯದರ್ಶಿ ನಾಗರಾಜು, ವಲಯ ಸಂಘಟಕ ಕೆ. ಈರಯ್ಯ, ಎಸ್ಪಿಬಿ ಅಭಿಮಾನಿಬಳಗದ ಅಧ್ಯಕ್ಷ ಶಿವಣ್ಣ ಹಾಜರಿದ್ದರು.