ಚಾಮರಾಜನಗರ: ಮಹಿಳೆಯರಿಗೆ ಇಂದಿನ ಔಪಚಾರಿಕ ಶಿಕ್ಷಣದ ಜತೆಗೆ ಜೀವನಾಧಾರಿತ ಶಿಕ್ಷಣನೀಡುವ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕಿ ಲೀಲಾವತಿ ತಿಳಿಸಿದರು.
ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪ್ರಕೃತಿ ಜ್ಞಾನವಿಕಾಸಕೇಂದ್ರದ ಉದ್ಘಾಟನೆ ಹಾಗೂ ಮಹಿಳಾವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾರೇ ಆದರೂ ಕಾನೂನಿನ ಪರಿದಿಯಲ್ಲಿ ನಡೆದಾಗ ಯಾವುದೇ ತಪ್ಪುಗಳು ನಡೆಯುವ ಸಾಧ್ಯತೆಯಿಲ್ಲ. ಪ್ರತಿಯೊಬ್ಬರು ಕಾನೂನಿನ ಜ್ಞಾನಪಡೆಯಬೇಕು, ಹೆಣ್ಣುಮಕ್ಕಳನ್ನು ಓದುವ ವಯಸ್ಸಿನಲ್ಲೇ ಮದುವೆ ಮಾಡುವುದು ಕಾನೂನುಬಾಹಿರ, ಹೆಣ್ಣುಮಕ್ಕಳು ಕೇವಲ ಔಪಚಾರಿಕ ಶಿಕ್ಷಣಕ್ಕೆ ಮೀಸಲಾಗಬಾರದು, ಮುಂದಿನಜೀವನ ನಿರ್ವಹಣೆಯ ಶಿಕ್ಷಣದ ಬಗ್ಗೆಯೂ ಗಮನಹರಿಸಬೇಕು, ಇಂತಹಮಹತ್ವದ ಜವಾಬ್ದಾರಿ ನಮ್ಮ ಪೋಷಕರ ಮೇಲಿದೆ, ಪೋಷಕರು ಮಕ್ಕಳ ಭವಿಷ್ಯ ರೂಪಿಸುವ ರೂವಾರಿಗಳು ಆಗಬೇಕು ಎಂದರು.
ವಕೀಲ ಸುರೇಶ್ ಮಹಿಳಾಪರ ಕಾನೂನಿನ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್, ಸಮನ್ವಯಾಧಿಕಾರಿ ಶೃತಿಸಚಿನ್, ಗ್ರಾಪಂ ಸದಸ್ಯರಾದ ಶಿವಮೂರ್ತಿ, ಗ್ರಾಮದ ಮುಖಂಡ ರಾಜು, ನಾಗಮಣಿ, ನಾಗರತ್ನ ಸೇರಿದಂತೆ ಸಂಸ್ಥೆಯ ಸೇವಾಪ್ರತಿನಿಧಿಗಳು ಹಾಜರಿದ್ದರು.