ಶಾಸಕ ನಿರಂಜನಕುಮಾರ್ ರಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ
ಗುಂಡ್ಲುಪೇಟೆ: ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳು ವಂಚಿತವಾಗಬಾರದು ಎಂಬ ಉದ್ಧೇಶದಿಂದ ಧರ್ಮಸ್ಥಳ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಲ್ಯಾಪ್‍ಟಾಪ್ ಮತ್ತು ಟ್ಯಾಬ್‍ಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಸಲಹೆ ನೀಡಿದರು.
ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಜ್ಞಾನತಾಣದ ಅಡಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಮತ್ತು ಟ್ಯಾಬ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೀರೇಂದ್ರ ಹೆಗ್ಡೆ ಅವರು ಗ್ರಾಮಾಭಿವೃದ್ಧಿಗೆ ಒತ್ತು ನೀಡಿ ಗಾಂಧೀಜಿ ಕಂಡ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರಿಗೆ ಸಾಲ ನೀಡಿ ಅವರು ಆರ್ಥಿಕವಾಗಿ ಮುಂದೆ ಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಲ ತುಂಬಿದ್ದಾರೆ ಎಂದರು.
ಆತ್ಮ ನಿರ್ಭರ್ ಯೋಜನೆಯ ಅಡಿಯಲ್ಲಿ ಡೈರಿ ಕಟ್ಟಡ ನಿರ್ಮಾಣಕ್ಕೆ ಅನುದಾನ, ಅಂಗವಿಕಲರಿಗೆ ಸಹಾಯ ಧನ, ಹಲವು ಮಂದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗಬಾರದು ಎಂಬುದನ್ನು ಹೆಗ್ಡೆಯವರು ಮನದಲ್ಲಿಟ್ಟುಕೊಂಡು ತಾಲ್ಲೂಕಿನಲ್ಲಿ ಪ್ರಸ್ತುತ 56 ಮಂದಿಗೆ ಲ್ಯಾಪ್‍ಟಾಪ್ ಮತ್ತು ಟ್ಯಾಬ್ ವಿತರಿಸಲಾಗುತ್ತಿದೆ. ಸರ್ಕಾರದ ವತಿಯಿಂದ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ಆನ್‍ಲೈನ್ ಕ್ಲಾಸ್ ಮತ್ತು ವಿದ್ಯಾಗಮನ ರಾಜ್ಯದಲ್ಲಿ ತುಂಬಾ ಯಶಸ್ವಿಯಾಗಿದ್ದು, ವಿದ್ಯಾಗಮವನ್ನು ಹಲವು ರಾಜ್ಯಗಳು ಅನುಸಿರುತ್ತಿವೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿಯೂ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಶಿಕ್ಷಣಕ್ಕೆ ಒತ್ತು ನೀಡಿ ಕಲಿಯಲ್ಲಿ ಯಾರು ಹಿಂದೆ ಉಳಿಯಬಾರದು ಎಂಬ ಉದ್ಧೇಶದಿಂದ ನೀಡುತ್ತಿರುವ ಆನ್‍ಲೈನ್ ತರಗತಿಯನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರು ಧರ್ಮಸ್ಥಳ ಸಂಸ್ಥೆ ಲ್ಯಾಪ್‍ಟಾಪ್ ನೀಡಿದ್ದಕ್ಕು ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
ಈ ವೇಳೆ ಧರ್ಮಸ್ಥಳ ಯೋಜನಾಧಿಕಾರಿ ಶಿವಪ್ರಸಾದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮುರುಳಿರಾಜು, ಹುರದಹಳ್ಳಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin