ಚಾಮರಾಜನಗರ: ರೈತರು ಕೃಷಿ ಚಟುವಟಿಕೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ರೈತ ಉತ್ಪಾದಕ ಸಂಸ್ಥೆಗಳು ಉತ್ತೇಜನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ತೋಟಗಾರಿಕೆ, ಮೀನುಗಾರಿಕೆ, ಕೃಷಿ ಇಲಾಖೆ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ವ್ಯಾಪಾರ ಅಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕೇವಲ ಒಂದು ಬೆಳೆಗೆ ಅವಲಂಬನೆಯಾಗದೆ ಮಿಶ್ರ ಬೇಸಾಯ ಪದ್ದತಿ ಅನುಸರಿಸಿ ಆರ್ಥಿಕವಾಗಿ ಸದೃಢರಾಗಬೇಕು. ವಿವಿಧ ಬೆಳೆಗಳನ್ನು ಬೆಳೆಯುವ ರೈತರನ್ನು ಒಗ್ಗೂಡಿಸಿ ಪರಸ್ಪರ ಸಹಯೋಗದೊಂದಿಗೆ ಮಾರುಕಟ್ಟೆಯನ್ನು ರೂಪಿಸಿಕೊಳ್ಳಬೇಕು. ತೋಟಗಾರಿಕೆ, ಮೀನುಗಾರಿಕೆ, ಕೃಷಿ ಇಲಾಖೆಗಳಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬ ರೈತರಿಗೂ ತಲುಪಿಸಬೇಕು ಎಂದರು.
ಜಿಲ್ಲೆಯಲ್ಲಿ ಹವಾಗುಣ, ಮಣ್ಣು ಮತ್ತು ವಲಯಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಲು ರೈತರು ಸನ್ನದ್ದರಾಗಬೇಕು. ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ವ್ಯಾಪಾರ ಅಭಿವೃದ್ಧಿ ಕಾರ್ಯಗಾರದಲ್ಲಿ ರೈತರು ತಮ್ಮ ಕುಂದು ಕೊರತೆಗಳನ್ನು ಮುಕ್ತವಾಗಿ ಚರ್ಚಿಸಿ ಮಾಹಿತಿ ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ಅವರು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಗಿರೀಶ್, ಕೃಷಿ ಉಪನಿರ್ದೇಶಕರಾದ ಸೋಮಶೇಖರ್, ರೇಷ್ಮೆ ಉಪನಿರ್ದೇಶಕರಾದ ಪುಟ್ಟಮಲ್ಲು, ತೋಟಗಾರಿಕೆ ಉಪನಿರ್ದೇಶಕರಾದ ಶಿವಪ್ರಸಾದ್, ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯ ವಿಲಿಯಂ ಡಿಸೋಜಾ, ಅಶ್ರಫ್ ಹಲ್ ಹಸನ್, ಸಂಪನ್ಮೂಲ ವ್ಯಕ್ತಿ ಗುಣಶೇಖರ್ ಆರಾಧ್ಯ, ರೈತ ಮುಖಂಡರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.