ಚಾಮರಾಜನಗರ: ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗ ಕ್ರಮಕೈಗೊಳ್ಳುತ್ತಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಅವರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷರಾದ ಶಿವಣ್ಣ ಅವರು ತಾವು ನಿನ್ನೆಯಿಂದ ಹನೂರು, ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪೌರಕಾರ್ಮಿಕರೊಂದಿಗೆ ಸಮಾಲೋಚಿಸಿ ಸಮಸ್ಯೆ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಈಗಾಗಲೇ ೨೬ ರಿಂದ ೨೭ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಲಾಗಿದೆ. ಸಮಸ್ಯೆಗಳನ್ನು ತಿಳಿದುಕೊಂಡು ಅದರ ನಿವಾರಣೆಗೆ ಆಯೋಗ ಮುಂದಾಗಿದೆ. ಪೌರಕಾರ್ಮಿಕರ ಸ್ಥಿತಿ ಗತಿಗಳು, ಅವರಿಗೆ ಒದಗಿಸಬೇಕಾದ ಸವಲತ್ತುಗಳು, ಶಿಕ್ಷಣ, ಆರೋಗ್ಯ ಹೀಗೆ ನಾನಾ ವಿಷಯಗಳು ಸೇರಿದಂತೆ ಸಮಗ್ರ ಅಭಿವೃದ್ದಿಗೆ ಪೂರಕವಾಗಿರುವ ೪ ವರದಿಗಳನ್ನು ಅಧ್ಯಯನ ಮಾಡಲಾಗಿದೆ. ಪೌರಕಾರ್ಮಿಕರಿಗೆ ಸಮರ್ಪಕವಾಗಿ ಸೌಲಭ್ಯ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ ೨೦೧೩ರಲ್ಲೇ ಜಾರಿಗೆ ಬಂದಿದೆ. ತಲೆಮೇಲೆ ಮಲ ಹೊರುವ ಪದ್ದತಿಯನ್ನು ಈ ಹಿಂದೆಯೆ ನಿಷೇಧಿಸಲಾಗಿದೆ. ಎಲ್ಲಿಯೇ ಆಗಲಿ ಯಂತ್ರಗಳನ್ನು ಬಳಸದೇ ಪೌರಕಾರ್ಮಿಕರಿಂದ ಮ್ಯಾನ್‌ಹೋಲ್ ಗಳಲ್ಲಿ ನೈರ್ಮಲ್ಯ ಕೆಲಸವನ್ನು ಮಾಡಿಸುವುದು ಕಾಯ್ದೆಗೆ ವಿರುದ್ದವಾಗಿದೆ. ಇಂತಹ ಕಾಯ್ದೆಯನ್ನು ಉಲ್ಲಂಘಿಸಿ ಕೆಲಸ ಮಾಡಿಸಿದವರನ್ನು ಶಿಕ್ಷೆಗೆ ಗುರಿಯಾಗಿಸಿದ್ದಲ್ಲದೇ ದಂಡು ವಿಧಿಸಿದ ಪ್ರಕರಣಗಳು ಸಾಕಷ್ಟು ಇವೆ ಎಂದು ಅಧ್ಯಕ್ಷರು ತಿಳಿಸಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಶಿಕ್ಷಾರ್ಹ ಅಪರಾಧವಾಗಿದ್ದು ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ದತಿ ಇನ್ನೂ ಇದೆಯೆ ಎಂಬ ಬಗ್ಗೆ ಸರ್ವೆ ಕಾರ್ಯ ನಡೆಸಲಾಗಿದೆ. ಅಧಿಕಾರಿಗಳಿಗೂ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಪೌರಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪದವಿಯ ವರೆಗೆ ಉಚಿತ ಶಿಕ್ಷಣ, ಪ್ರತಿಷ್ಠಿತ ಶಾಲೆ, ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಶುಲ್ಕ ಮರುಪಾವತಿ ಸೇರಿದಂತೆ ಇನ್ನಿತರ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಆಯೋಗ ಶಿಫಾರಸು ಮಾಡಲಿದೆ. ಪೌರಕಾರ್ಮಿಕರಿಗೆ ಸುರಕ್ಷತಾ ಧಿರಸುಗಳು ಹೊಂದಿಕೆಯಾಗುವಂತೆ ನೀಡಬೇಕು. ಕೆಲಸ ಮಾಡುವ ಸ್ಥಳಗಳಲ್ಲಿ ವಿಶ್ರಾಂತಿ ಗೃಹಗಳ ನಿರ್ಮಾಣ, ಸೇವಾ ಭದ್ರತೆ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸುವಂತೆ ಆಯೋಗ ತಿಳಿಸಿದೆ ಎಂದು ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋದನಾ ಅಧಿಕಾರಿ ಸುವರ್ಣ, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಭಾಗ್ಯ, ಪುಷ್ಪಲತ, ರಾಜೇಂದ್ರ ಪಿ ಉಡಿಗಾಲ, ಮುಖಂಡರಾದ ಬಸವನಪುರ ರಾಜಶೇಖರ್ ಇತರರು ಉಪಸ್ಥಿತರಿದ್ದರು.
