ಚಾಮರಾಜನಗರ: ಗುಂಡ್ಲುಪೇಟೆಯ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಅಗತ್ಯವಿದ್ದು, ಈ ಸಂಬಂಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗುಂಡ್ಲುಪೇಟೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ಪ್ರಸ್ತುತ ಇರುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವುದರಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಬಹುದು. ಶಾಸಕರಾದ ಸಿ.ಎಸ್. ನಿರಂಜನಕುಮಾರ್ ಅವರು ಸಹ ರಸ್ತೆ ಅಭಿವೃದ್ದಿ ಸಂಬಂಧ ನನ್ನೊಂದಿಗೆ ಮಾತನಾಡಿದ್ದು, ಈ ಸಂಬಂಧ ಕ್ರಮ ವಹಿಸಲಾಗುತ್ತದೆ ಎಂದರು.
ಬೇಗೂರು ಪಟ್ಟಣದ ಮುಖ್ದಯ ರಸ್ತೆಯಲ್ಲಿಯೇ ೨ ಕೋಟಿ ರೂ. ಗಳಿಗೂ ಹೆಚ್ಚು ವೆಚ್ಚ ಮಾಡಿ ಉತ್ತಮವಾದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಇಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿನ ವಿದ್ಯಾರ್ಥಿನಿಲಯವನ್ನು ಅವಲಂಬಿಸಿದ್ದಾರೆ. ಅವರಿಗೆ ಉತ್ತಮ ಊಟ, ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಬೇಕು. ನಿಲಯದ ಪಾಲಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಡಿ. ದೇವರಾಜ ಅರಸು ಅವರ ಹೆಸರಿನಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲಾಗಿದೆ. ಅರಸು ಅವರು ಹಿಂದುಳಿದವರು ಸೇರಿದಂತೆ ಅನೇಕರ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಅವರು ನಡೆದು ಬಂದ ದಾರಿ, ಸಂದೇಶ, ವಿಚಾರಧಾರೆಗಳನ್ನು ಮುಂದಿನ ಪೀಳಿಗೆಯೂ ತಿಳಿಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಶಾಸಕರಾದ ಸಿ.ಎಸ್. ನಿರಂಜನಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇಂದಿರಾ ಸುರೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇವಣ್ಣ, ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
