ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಹೆಚ್ಚು ಅಭಿವೃದ್ದಿಗೊಳಿಸುವ ನಿಟ್ಟಿನ್ಲಲಿ ಅಗತ್ಯ ಕ್ರಮ ವಹಿಸಲಾಗುವುದೆಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ್ ವಿ. ಕತ್ತಿ ಅವರು ತಿಳಿಸಿದರು.

ಗುಂಡ್ಲುಪೇಟೆ ತಾಲೂಕಿನ ಬಂಡಿಪುರದಲ್ಲಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಬಂಡೀಪುರ ಅರಣ್ಯದಲ್ಲಿ ಅಭಿವೃದ್ದಿ ಕೆಲಸಗಳಾದ ಚೆಕ್ ಡ್ಯಾಂ ನಿರ್ಮಾಣ, ಲಾಂಟಾನ ತೆರವು ಸೇರಿದಂತೆ ಇತರೆ ಕಾರ್ಯಗಳು ಪ್ರಗತಿಯಲ್ಲಿವೆ. ಇವುಗಳನ್ನು ಪರಿಶೀಲಿಸಿದ್ದೇನೆ. ಕೊರೊನಾ ಇದ್ದ ಕಾರಣ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಬೂದಿಪಡಗದಲ್ಲಿ ಆನೆ ಶಿಬಿರ ನಿರ್ಮಾಣಕ್ಕೆ ಸಾಧ್ಯವಾಗಲಿಲ್ಲ. ಆನೆ ಶಿಬಿರ ಬಜೆಟ್‌ನಲ್ಲಿ ಘೋ?ಣೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಸಂರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ೬೦೦ ಕಿ.ಮೀ. ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈಗಾಗಲೇ ೧೮೦ ಕಿ.ಮೀ. ನಿರ್ಮಾಣವಾಗಿದೆ. ಕಂಬಿಗಳ ತಡೆಗೋಡೆ ಕಟ್ಟಲು ರೈಲು ಕಂಬಿಗಳು ಸಿಗುತ್ತಿಲ್ಲ, ಅಲ್ಲದೆ ಅದು ದುಬಾರಿಯಾಗಿದೆ. ೧ ಕಿ.ಮೀ. ರೈಲ್ವೆ ಕಂಬಿಗಳ ತಡೆ ಗೋಡೆ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ವೆಚ್ಚವಾಗಲಿದೆ. ಆದರೆ, ೧ ಕಿ.ಮೀ. ರೋಪ್ ವೇ ಬೇಲಿಯನ್ನು ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಬಹುದು. ಆದ್ದರಿಂದ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ ಎಂದರು.

ಹುಲಿ ಸಂರಕ್ಷಣೆಯಲ್ಲಿ ರಾಜ್ಯ ೨ನೇ ಸ್ಥಾನದಲ್ಲಿದೆ. ಎಲ್ಲಾ ಸಂರಕ್ಷಿತಾರಣ್ಯಗಳಲ್ಲಿ ಒಟ್ಟು ೬.೮೦೦ ಆನೆಗಳು, ೫೬೦ ಹುಲಿಗಳು, ೪೦೦ ಚಿರತೆಗಳಿವೆ. ರಾಜ್ಯ ಅರಣ್ಯ, ಪ್ರಾಣಿ ಸಂಕುಲದಿಂದ ಸಮೃದ್ದವಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುತ್ತಿದ್ದವರು ಹೊಂದಿದ್ದ ೧೩ ಲಕ್ಷ ಪಡಿತರ ಚೀಟಿಯನ್ನು ರದ್ದು ಪಡಿಸಲಾಗಿದೆ. ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದರು. ನಂತರ ಸಚಿವರು ರಾಂಪುರ ಆನೆ ಶಿಬಿರಕ್ಕೆ ತೆರಳಿ ಪರಿಶೀಲಿಸಿದರು.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲೇಶಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕಾ. ರಾಮೇಶ್ವರಪ್ಪ, ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕರಾದ ರಮೇಶ್‌ಕುಮಾರ್, ಎಸಿಎಫ್ ಕೆ. ಪರಮೇಶ್, ಡಿಸಿಎಫ್ ಮಾಲತಿ ಪ್ರಿಯಾ ಇತರರು ಈ ಸಂದರ್ಭದಲ್ಲಿ ಇದ್ದರು.