ಚಾಮರಾಜನಗರ: ಜಿಲ್ಲೆಯಲ್ಲಿರುವ ಕೊಳಚೆ ಪ್ರದೇಶಗಳು ಹಾಗೂ ಪೌರಕಾರ್ಮಿಕರ ಕಾಲೋನಿಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರಿನಂಜನಪುರ ರಸ್ತೆ ಪೌರಕಾರ್ಮಿಕರ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೨೧ ಕೊಳಚೆ ಪ್ರದೇಶಗಳಿದ್ದು, ೩ ಸರ್ಕಾರಿ ಸ್ಥಳದಲ್ಲಿದೆ. ಸೂರಿಲ್ಲದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ೨೪ ಸಾವಿರ ಕುಟುಂಬ ಗುರುತಿಸಿ ಅವರಿಗೆ ಮನೆ ನಿರ್ಮಾಣ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲೆಯ ಉಳಿದ ಕೊಳಚೆ ಪ್ರದೇಶಗಳಲ್ಲಿಯೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ವಸತಿ ಹಾಗೂ ನಿವೇಶನ ರಹಿತರಿಗೆ ಸೂರು ವ್ಯವಸ್ಥೆ ಮಾಡಲಾಗುವುದು. ರೈತರು, ಜೀತಮುಕ್ತರು ಹಾಗೂ ಇತರರ ಸಂಬಂಧ ಸಭೆ ಕರೆಯಲಾಗುತ್ತಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಸಹ ಚರ್ಚಿಸಲಾಗುವುದು ಎಂದರು.
ಕರಿನಂಜನಪುರ ರಸ್ತೆಯಲ್ಲಿರು ೮೮ ಫಲಾನುಭವಿಗಳಿಗೆ ಇಂದು ಹಕ್ಕು ಪತ್ರ ವಿತರಣೆ ಮಾಡುತ್ತಿದ್ದು, ಮಹಿಳೆಯರ ಹೆಸರಿನಲ್ಲೇ ಹಕ್ಕು ಪತ್ರ ನೀಡಬೇಕು. ಅವರು ಜವಾಬ್ದಾರಿಯಿಂದ ತಮ್ಮ ಸ್ವತ್ತನ್ನು ರಕ್ಷಿಸಿಕೊಳ್ಳುತ್ತಾರೆ. ಇಂದಿಗೂ ಕಡಿಮೆ ಜಾಗದಲ್ಲಿ ಪೌರಕಾರ್ಮಿಕರ ಎರಡು ಮೂರು ಕುಟುಂಬಗಳು ವಾಸಮಾಡುತ್ತಿವೆ ಎಂದರೆ ತುಂಬಾ ದುರದೃ?ಕರ ಸಂಗತಿಯಾಗಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಕ್ರಮ ವಹಿಸಿದೆ. ಪೌರಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಬಡತನದ ಕುಟುಂಬಗಳು ಮುಂದೆಯೂ ಬಡವರಾಗಿ ಉಳಿಯಬೇಕು ಎಂಬುದಿಲ್ಲ ಅವರನ್ನು ಮುನ್ನೆಲೆಗೆ ತಂದು ಅಭಿವೃದ್ಧಿ ಪರ ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರದ ಕರಿನಂಜನಪುರ ರಸ್ತೆ ಪೌರ ಕಾರ್ಮಿಕರ ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನ್‌ಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭಾ ಅಧ್ಯಕ್ಷರಾದ ಆಶಾ ನಟರಾಜು, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ನಿರ್ದೇಶಕ ನಾಗರಾಜ ಎಂ. ಬಿರಾದರ್, ನಗರಸಭೆ ಸದಸ್ಯರಾದ ಮಹೇಶ್, ಮನೋಜ್ ಪಟೇಲ್, ಚಂದ್ರು, ನಗರಸಭಾ ಆಯುಕ್ತರಾದ ಕರಿಬಸವಯ್ಯ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಪೌರಕಾರ್ಮಿಕರ ಸಮುದಾಯದ ವಿದ್ಯಾರ್ಥಿನಿಯನ್ನು ಸಚಿವರಾದ ವಿ. ಸೋಮಣ್ಣ ಅವರು ಹತ್ತಿರಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.