ನಂಜನಗೂಡು: ಕೊರೋನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಸೋಂಕಿತರಿಗೆ ತೊಂದರೆಯಾಗದಂತೆ ವೈದ್ಯರು ಕಾರ್ಯನಿರ್ವಹಿಸಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ
ತಾಲೂಕು ವರುಣ ಕ್ಷೇತ್ರಕ್ಕೆ ಸೇರುವ ತಗಡೂರು ಗ್ರಾಮದ ಸಮುದಾಯ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಕೊರೋನಾ ಸೋಂಕಿತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಆಸ್ಪತ್ರೆಯಲ್ಲಿ ಮಾಡಲಾಗಿರುವ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಸೋಂಕಿತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಅವರಿಗೆ ಆಕ್ಸಿಜನ್, ವೆಂಟಿಲೇಟರ್, ಬೆಡ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಸ್ಥಳದಲ್ಲೇ ಇದ್ದ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ ಹಾಗೂ ವೈದ್ಯಾಧಿಕಾರಿ ಈಶ್ವರ್ ರವರಿಗೆ ಸೂಚನೆ ನೀಡಿದರು.
ಇದೇ ವೇಳೆ ಆಸ್ಪತ್ರೆಯ ವೈದ್ಯರು ಈ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ಹೆಚ್ಚುವರಿ ವೈದ್ಯರು ಬೇಕಾಗಿದ್ದಾರೆ ಎಂದು ಶಾಸಕರಲ್ಲಿ ಮನವಿ ಮಾಡಿದರು ಇದಕ್ಕೆ ಉತ್ತರಿಸಿದ ಅವರು ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಟಿ.ಸೋಮಶೇಖರ್ ಅವರ ಗಮನಕ್ಕೆ ತಂದು ಇಲ್ಲಿನ ವೈದ್ಯರ ಸಮಸ್ಯೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರಲ್ಲದೆ, ಚಾಮರಾಜನಗರದ ಘಟನೆ ಇನ್ನು ಮುಂದೆ ಎಲ್ಲಿಯೂ ನಡೆಯಬಾರದು ಆದ್ದರಿಂದ ಎಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ, ಡಾ. ಈಶ್ವರ್, ಎಪಿಎಂಸಿ ಉಪಾಧ್ಯಕ್ಷ ಆರ್. ಮಹದೇವು, ವೈದ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.