ಕಚೇರಿ ಸಭೆಯಲ್ಲಿ ಅಥವಾ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಮೂತ್ರವನ್ನು ತಡೆಹಿಡಿದಿದ್ದೀರಾ? ಕೆಲಸದ ಒತ್ತಡದಿಂದ ಊಟದ ಸಮಯವನ್ನು ಬಿಟ್ಟು ಹಸಿವನ್ನು ತಡೆಯುತ್ತೀರಾ? ರಾತ್ರಿ ಹೊತ್ತು ನಿದ್ರೆ ಬರ್ತಿದ್ದರೂ, ಮೊಬೈಲ್ ನೋಡಿ ಹೊತ್ತನ್ನೆ ಮರೆತಿದ್ದೀರಾ? ಬಹುಷಃ ಇದು ಎಲ್ಲರ ಜೀವನದ ಸಾಮಾನ್ಯ ಅನುಭವ. ಆದರೆ, ಇಂತಹ ಸಣ್ಣ ಅನಿವಾರ್ಯ ತಡೆಯೂ ದೀರ್ಘಕಾಲದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳನ್ನೇ ತರಬಹುದು ಎಂಬುದು ನಿಮಗೆ ಗೊತ್ತೇ?

ವೇಗಧಾರಣೆ ಅಂದರೆ ಏನು?
ವೇಗ ಎಂದರೆ ಒಂದು ಶರೀರದಲ್ಲಿ ಉಂಟಾಗುವ ಸಹಜ ಸ್ವಾಭಾವಿಕ ಪ್ರಚೋದನೆಗಳು. ಶರೀರದ ಸಮತ್ವ ಕಾಪಾಡಲು ಆಗುವಂತಹ ಜೈವಿಕ ಪ್ರತಿಕ್ರಿಯೆಗಳು. ಉದಾಹರಣೆಗೆ ಮೂತ್ರ ಮಲ ಕಣ್ಣೀರು….ಇವುಗಳ ಬಲವಂತದ ನಿಯಂತ್ರಣಕ್ಕೆ ವೇಗಧಾರಣೆ ಎನ್ನುವರು. “ಸ್ವಲ್ಪ ಹೊತ್ತು ತಡೆದುಕೊಳ್ಳೋಣ” ಎಂಬ ಸಣ್ಣ ಅಭ್ಯಾಸವೇ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳ ದೊಡ್ಡ ಕಾರಣವಾಗಬಹುದು.
ವೇಗಧಾರಣೆಯ ದುಷ್ಪರಿಣಾಮಗಳು:
ಮೂತ್ರ ವೇಗದ ನಿರೋಧನೆ: ಮೈ ಕತ್ತರಿಸಿದಂತೆ ನೋವು, ಮೂತ್ರಕೋಶದ ಕಲ್ಲು , ಮೂತ್ರಾಶಯದಲ್ಲಿ ನೋವು, ಮೂತ್ರಕೃಚ್ಛ(ಕಷ್ಟ ಮೂತ್ರಪ್ರವೃತ್ತಿ), ತಲೆನೋವು ಉಂಟಾಗುತ್ತವೆ.

ಪುರಿಷ ವೇಗದ ನಿರೋಧನೆ: ಮಲ ವಿಸರ್ಜನೆ ತಡೆಯುವುದರಿಂದ ಮೀನುಖಂಡ ಬಿಗಿದಂತಹ ನೋವು, ನೆಗಡಿ, ತಲೆನೋವು, ಮೈ ಕತ್ತರಿಸಿದಂತೆ ನೋವು (ಗುದದಲ್ಲಿ ಕತ್ತರಿಸಿದಂತೆ ನೋವು), ಎದೆ ತಡೆದಂತಹ ನೋವು, ಹೊಟ್ಟೆಯಲ್ಲಿ ಗಾಳಿ ತುಂಬಿದಂತಾಗುವುದು ,ಹೂಸು ಮತ್ತು ಮಲಗಳ ಪ್ರವರ್ತನೆಯಾಗದಿರುವುದು.
ಅಧೋವಾತ ವೇಗದ ನಿರೋಧನೆ: ಅಪಾನವಾಯು (ಗ್ಯಾಸನ್ನು/ ಹೂಸು) ತಡೆಯುವುದರಿಂದ ಮಲ, ಮೂತ್ರ ಮತ್ತು ಅಪಾನವಾಯುವಿನ ಅವರೋಧ ಉಂಟಾಗುತ್ತದೆ. ಹೊಟ್ಟೆಯಲ್ಲಿ ಗಾಳಿ ತುಂಬಿದಂತಾಗುವುದು , ಹೊಟ್ಟೆ ನೋವು ಮತ್ತು ವಿನಾ ಆಯಾಸ ಶ್ರಮ ಉಂಟಾಗುತ್ತದೆ ,ದೃಷ್ಟಿನಾಶ, ಹೃದ್ರೋಗವೂ, ಜಠರದಲ್ಲಿ ವಾತ ಸಂಬಂಧೀ ರೋಗಗಳುಂಟಾಗುತ್ತವೆ.
ಕ್ಷುಧಾ ವೇಗದ ನಿರೋಧನೆ: ಹಸಿವೆ ತಡೆಯುವುದರಿಂದ ದುರ್ಬಲತೆ, ಮೈಕತ್ತರಿಸಿದಂತೆ ನೋವು , ಹೊಟ್ಟೆ ನೋವು, ತಲೆ ತಿರುಗುವುದು ಉಂಟಾಗುತ್ತದೆ.
ಪಿಪಾಸಾ ವೇಗದ ನಿರೋಧನೆ: ನೀರಡಿಕೆಯನ್ನು ತಡೆದರೆ ಗಂಟಲು ಮತ್ತು ಬಾಯಿ ಒಣಗುವುದು, ಮೈಕೈ ನೋವು, ಸುಸ್ತು, ಕಿವುಡುತನ, ಹೃದಯ ರೋಗ ಇವುಗಳು ಉಂಟಾಗುತ್ತವೆ.
ನಿದ್ರಾ ವೇಗದ ನಿರೋಧನೆ: ನಿದ್ದೆ ತಡೆಯುವುದರಿಂದ ಆಕಳಿಕೆ, ಮೈಕೈನೋವು, ಆಲಸ್ಯ ,ತೂಕಡಿಕೆ, ಶಿರೋರೋಗ ಮತ್ತು ಕಣ್ಣು ಭಾರವಾದಂತೆನಿಸುವುದು.
ಕ್ಷವತು ವೇಗದ ನಿರೋಧನೆ. -ಸೀನನ್ನು ತಡೆದರೆ ತಲೆನೋವು, ಮೈಗ್ರೇನ್,ಇಂದ್ರಿಯಗಳ ದೌರ್ಬಲ್ಯ, ಕತ್ತು ಹಿಡಿದುಕೊಳ್ಳುವುದು , ಮುಖದಪಾರ್ಶ್ವವಾಯು ಉಂಟಾಗುತ್ತವೆ.
ಕಾಸ ವೇಗದ ನಿರೋಧನೆ: ಕೆಮ್ಮು ಉಂಟಾದಾಗ ತಡೆದರೆ ಕೆಮ್ಮು ಹೆಚ್ಚುತ್ತದೆ. ಉಬ್ಬಸ (ದಮ್ಮು), ಅರುಚಿ, ಹೃದ್ರೋಗ, ಕ್ಷಯ, ಬಿಕ್ಕಳಿಕೆ ಉಂಟಾಗುತ್ತದೆ.
ಜ್ರುಂಬಾ ವೇಗದ ನಿರೋಧನೆ: ಆಕಳಿಕೆ ತಡೆಯುವುದರಿಂದ ಶರೀರ ಬಾಗುವುದು, ನಡುಕ/ಸೆಳೆತ, ಸ್ಪರ್ಶ ತಿಳಿಯದಿರುವಿಕೆ ಉಂಟಾಗುತ್ತದೆ.
ಉದ್ಗಾರ ವೇಗದ ನಿರೋಧನೆ : ತೇಗುಬರುವುದನ್ನು ತಡೆದರೆ ಅರುಚಿ, ಹೃದಯ ಮತ್ತು ಎದೆಭಾಗದಲ್ಲಿ ಹಿಡಿದುಕೊಂಡಂತಹ ನೋವು, ಹೊಟ್ಟೆಯುಬ್ಬರ, ಕೆಮ್ಮು, ಬಿಕ್ಕಳಿಕೆ ಉಂಟಾಗುತ್ತವೆ.
ಬಾಷ್ಪ ವೇಗದ ನಿರೋಧನೆ: ಕಣ್ಣೀರನ್ನು ತಡೆಯುವುದರಿಂದ ನೆಗಡಿ, ಕಣ್ಣು ನೋವು, ತಲೆನೋವು, ಹೃದ್ರೋಗ, ಕತ್ತು ಹಿಡಿದುಕೊಳ್ಳುವುದು ಉಂಟಾಗುತ್ತವೆ
ಚರ್ದಿ ವೇಗದ ನಿರೋಧನೆ: ವಾಂತಿ ಬಂದಾಗ ತಡೆದರೆ ಚರ್ಮದ ಸರ್ಪಸುತ್ತು, ಪಿತ್ತಗಂದೆ , ತುರಿಕೆ, ಭಂಗು, ಚರ್ಮ ರೋಗಗಳು, ಕಣ್ಣಿನಲ್ಲಿ ತುರಿಕೆ, ಜ್ವರ, ಕೆಮ್ಮು , ದಮ್ಮು ,ಊತ ಇವುಗಳುಂಟಾಗುತ್ತವೆ.
ಶ್ರಮ ಶ್ವಾಸ ವೇಗದ ನಿರೋಧನೆ: ಶ್ರಮ ಶ್ವಾಸ (ಮೇಲುಬ್ಬಸ) ತಡೆಯುವುದರಿಂದ ಹೃದ್ರೋಗ, ಸಮ್ಮೋಹ (ಮತ್ತು ಬರುವಿಕೆ) ಉಂಟಾಗುತ್ತದೆ.
ಶುಕ್ರ ವೇಗದ ನಿರೋಧನೆ: ಶುಕ್ರವೇಗವನ್ನು ತಡೆದರೆ ಅಧಿಕ ಪ್ರಮಾಣದಲ್ಲಿ ಶುಕ್ರಸ್ರಾವ ಉಂಟಾಗುತ್ತದೆ. ವೃಷಣ, ಶಿಶ್ನಗಳಲ್ಲೂ ನೋವು ,ಊತ,ಅಂಡವೃದ್ಧಿ, ಷಂಡತ್ವ ಮುಂತಾದ ರೋಗಗಳು ಉಂಟಾಗುತ್ತವೆ.
ವೇಗಗಳನ್ನು ತಡೆಯುವುದು ಹೇಗೆ ಹಾನಿಕಾರವೋ, ಅದೇ ರೀತಿ ಅವು ಸ್ವಾಭಾವಿಕವಾಗಿ ಬರದಿದ್ದರೂ ಬಲವಂತವಾಗಿ ಪ್ರೇರೇಪಿಸುವುದು (ಉದಾಹರಣೆಗೆ: ಹಸಿವಿಲ್ಲದಿದ್ದರೂ ತಿನ್ನುವುದು, ಬಾಯಾರಿಕೆವಿಲ್ಲದಿದ್ದರೂ ಹೆಚ್ಚಿನ ನೀರು ಕುಡಿಯುವುದು, ಮಲಮೂತ್ರಗಳ ಬಲವಂತ ವಿಸರ್ಜನೆ ಮಾಡುವುದು,ಮೂಗಿನಲ್ಲಿ ಚಿಕ್ಕ, ತುಂಡಾದ ವಸ್ತುಗಳನ್ನು ಹಾಕಿ ಅಥವಾ ಪುಡಿಗಳನ್ನು ಮೂಸಿಕೊಂಡು ಸೀನ ತರಿಸುವುದು) ಇವುಗಳು ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು. . ಹಾಗಾಗಿ ವೇಗಗಳನ್ನುತಡೆಯುವುದು ಮತ್ತು ಪ್ರೇರೇಪಿಸುವುದು ಎರಡೂ ಹಾನಿಕಾರಕ!
ಇಂದಿನ ತಂತ್ರಮಯ ಜೀವನದಲ್ಲಿ, ಮಲ, ಮೂತ್ರ, ನಿದ್ರೆ, ಆಹಾರ, ಮೊದಲಾದ ವೇಗಗಳನ್ನು ತಡೆಯುವ ಪ್ರವೃತ್ತಿ ಹೆಚ್ಚಾಗಿದೆ. ಈ ಪ್ರವೃತ್ತಿಯು ದೀರ್ಘಕಾಲದಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಆಯುರ್ವೇದವು ‘ವೇಗಧಾರಣೆ’ ತಪ್ಪಿಸಲು ಜಾಗೃತಿಯ ಸಂದೇಶ ನೀಡುತ್ತದೆ.
ನಿಮ್ಮ ಶರೀರವೇ ನಿಮಗೆ ನಿಜವಾದ ಸ್ನೇಹಿತ! ಅದರ ಮಾತನ್ನು ಕೇಳಿ. ಪ್ರಕೃತಿಯ ಕರೆಗೆ ಸ್ಪಂದನೆ ನೀಡಿದರೆ, ಆರೋಗ್ಯ ನಿಮ್ಮನ್ನು ಸದಾ ಒಲಿಸುತ್ತದೆ!

ಡಾ. ಶ್ವೇತಾ ಜೈನ್
ಸ್ನಾತಕೋತರ ವಿದ್ಯಾರ್ಥಿನಿ
ಸರ್ಕಾರಿ ಆಯುರ್ವೇದ ವೈದ್ಯ ಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ,
ಮೈಸೂರು