ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹಣೆ ಮತ್ತು ಬೃಹತ್ ಜನಜಾಗೃತಿ ಕಾರ್ಯಕ್ರಮವನ್ನು ಜುಲೈ 5ರಿಂದ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಅವರು, ಬೆಂಗಳೂರು ನಗರದ ಸಂಪಂಗಿ ರಾಮನಗರ ವಾರ್ಡ್ ನಲ್ಲಿ ಅಂದು(ಜು.5) ಬೆಳಿಗ್ಗೆ 9 ಗಂಟೆಗೆ ಮನೆ ಮನೆಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಅಭಿಯಾನದಲ್ಲಿ ಶೈಕ್ಷಣಿಕ ಶುಲ್ಕಗಳು, ಸರ್ಕಾರಿ ಶಾಲೆಗಳ ದುರ್ವ್ಯವಸ್ಥೆ, ಖಾಸಗಿ ಶಿಕ್ಷಕರ ಸಮಸ್ಯೆ, ಶುಲ್ಕ ನಿಯಂತ್ರಣ ಪ್ರಾಧಿಕಾರದ ರಚನೆ ಸೇರಿದಂತೆ ಹಲವಾರು ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರವು ಸಂಪೂರ್ಣ ವೈಫಲ್ಯಗೊಂಡಿರುವುದನ್ನು ಜನರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ.
ಸರ್ಕಾರದ ಹೊಣೆಗೇಡಿತನದ ಪರಿಣಾಮವಾಗಿ ಇಂದು ರಾಜ್ಯದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಶಾಲಾ ಶುಲ್ಕ ಗಳ ವಿಚಾರದಲ್ಲಿಯೂ ಸಹ ಪೋಷಕ ವರ್ಗ ಸಮಸ್ಯೆಗೀಡಾಗಿದೆ.ಈ ಎಲ್ಲ ಗೊಂದಲಗಳಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದು, ಈ ಎಲ್ಲ ವೈಫಲ್ಯಗಳನ್ನು ಬಗೆಹರಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಸಾವಿರಾರು ಕಾರ್ಯಕರ್ತರು ಸತತ 15 ದಿನಗಳ ಕಾಲ ರಾಜ್ಯದಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕನಿಷ್ಠ 5 ಲಕ್ಷ ಮನೆಗಳಿಗೆ ತೆರಳಿ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಾಂದೋಲನ ಕಾರ್ಯ ಕ್ರಮವನ್ನು ನಡೆಸುವವರಿದ್ದಾರೆ ಎಂದು ಹೇಳಿದರು.
ಅಭಿಯಾನದಲ್ಲಿ ಕರಪತ್ರ, ಎಲ್.ಇ.ಡಿ ವಾಹನ, ವಿಚಾರಗೋಷ್ಠಿ ಗಳು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿಸಲು ಈಗಾಗಲೇ ಹಲವು ರೂಪುರೇಷೆಗಳನ್ನು ಪಕ್ಷವು ಕೈಗೊಂಡಿದೆ.
ಅಭಿಯಾನದಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಪ್ರಚಾರ ಸಮಿತಿ ಅಧ್ಯಕ್ಷೆ ಶಾಂತಲಾ ದಾಮ್ಲೆ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಇದೇ ಸಮಯದಲ್ಲಿ ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಭಿಯಾನಕ್ಕೆ ಚಾಲನೆ ದೊರಕಲಿದೆ. ಆ ಮೂಲಕ ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಸಮಸ್ಯೆಗೆ ಆಮ್ ಆದ್ಮಿ ಪಕ್ಷವು ರಾಜ್ಯದ ಜನತೆಯ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.