ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬೇಡಗುಳಿ ಗ್ರಾಮದಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಪಾಲ್ಗೊಂಡು ಸುತ್ತಮುತ್ತಲಿನ ಹಲವು ಪೋಡು ಹಾಡಿಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಅಹವಾಲುಗಳನ್ನು ಆಲಿಸಿದರು.
ಬೇಡಗುಳಿ ವ್ಯಾಪ್ತಿಯ ಮಾರಿಗುಡಿ ಪೋಡು, ರಾಮಯ್ಯನಪೋಡು, ಬಿಸಿಲಗೆರೆ ಹಾಡಿ, ಕಾಡಿಗೆರೆ ಹಾಡಿಗಳಿಗೆ ಜಿಲ್ಲಾಧಿಕಾರಿಯವರು ಭೇಟಿ ಕೊಟ್ಟು ಮೂಲ ಸೌಕರ್ಯಗಳ ಸಂಬಂಧ ಮಾಹಿತಿ ಪಡೆದರು. ಖುದ್ದು ಅರಣ್ಯದಂಚಿನ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರ ಕುಂದು ಕೊರತೆಗಳನ್ನು ವಿಚಾರಿಸಿದರು.
ಬೇಡಗುಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಪ್ರತಿನಿತ್ಯ ಎಷ್ಟು ಜನರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಯಾವ ಬಗೆಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ? ಔಷಧಗಳ ಲಭ್ಯತೆ ದಾಸ್ತಾನು ಹೇಗಿದೆ ಎಂಬ ಬಗ್ಗೆ ವೈದ್ಯರಿಂದಲೇ ವಿವರ ಪಡೆದುಕೊಂಡರು. ಬೇಡಗುಳಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿ, ಪಡಿತರವನ್ನು ಕಾರ್ಡುದಾರರಿಗೆ ವಿತರಿಸಿದರು.
ಬಳಿಕ ಮಾರಿಗುಡಿ ಪೋಡಿಗೆ ಭೇಟಿ ಕೊಟ್ಟು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಅಡುಗೆ ತಯಾರಿಸಲು ಅನಿಲ ಸಿಲಿಂಡರ್ ಸರಿಯಾಗಿ ಲಭ್ಯವಾಗುತ್ತಿದೆಯೇ ಎಂಬ ಬಗ್ಗೆ ಮಹಿಳೆಯರಿಂದ ತಿಳಿದುಕೊಂಡರು. ಇದೇ ವೇಳೆ ಸೋಲಾರ್ ವ್ಯವಸ್ಥೆ ಸಮರ್ಪಕವಾಗಿ ಪೂರೈಕೆಯಾಗದಿರುವ ಬಗ್ಗೆ ಅಲ್ಲಿನ ಜನರು ಗಮನಕ್ಕೆ ತಂದರು. ಸ್ಥಳದಲ್ಲಿಯೇ ಇದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳಿಗೆ ಈ ಬಗ್ಗೆ ತುರ್ತು ಕ್ರಮವಹಿಸುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ಪೋಡಿನಲ್ಲಿದ್ದ ಮಕ್ಕಳೊಂದಿಗೆ ಅಕ್ಕರೆಯಿಂದ ಮಾತನಾಡಿದ ಜಿಲ್ಲಾಧಿಕಾರಿಯವರು ಯಾವ ಶಾಲೆಯಲ್ಲಿ ಓದುತ್ತಿದ್ದೀರಿ,? ಅಂಗನವಾಡಿಗೆ ಯಾರು ಹೋಗುತ್ತಿದ್ದೀರಿ? ಶಾಲೆಯಲ್ಲಿ ಊಟ ಉಪಚಾರ ಪಾಠ ಚಟುವಟಿಕೆಗಳು ಹೇಗೆ ನಡೆಯುತ್ತಿದೆ? ಎಂದು ವಿಚಾರಿಸಿದರು.
ರಾಮಯ್ಯನಪೋಡು, ಬಿಸಿಲಗೆರೆ ಹಾಡಿ, ಕಾಡಿಗೆರೆ ಹಾಡಿಗಳಿಗೆ ತೆರಳಿದ ಜಿಲ್ಲಾಧಿಕಾರಿಯವರಿಗೆ ಸ್ಥಳೀಯರು ಕುಡಿಯುವ ನೀರು, ರಸ್ತೆ, ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮನವಿ ಮಾಡಿದರು.
ಇದಕ್ಕೂ ಮೊದಲು ಬೇಡಗುಳಿಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯರು ಅಹವಾಲುಗಳನ್ನು ಸಲ್ಲಿಸಿದರು. ಸ್ಥಳೀಯ ಭಾಗಕ್ಕೆ ಒಂದು ಖಾಸಗಿ ಬಸ್ ಮಾತ್ರ ಸಂಚರಿಸುತ್ತಿದೆ. ಹೆಚ್ಚು ಬಸ್ ವ್ಯವಸ್ಥೆ ಕಲ್ಪಿಸಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ರಸ್ತೆ, ಕುಡಿಯುವ ನೀರು ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕು. ವಾರದ ಎಲ್ಲಾ ದಿನಗಳಲ್ಲೂ ವೈದ್ಯರನ್ನು ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಬೇಕು ಎಂಬುದೂ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಮಾತನಾಡಿ ಕೆಲವು ಮೂಲ ಸೌಕರ್ಯಗಳಿಗೆ ಅನುದಾನದ ನೆರವು ಪಡೆದು ಚರ್ಚಿಸಿ ಇಲಾಖೆಗಳ ಸಮನ್ವಯದೊಂದಿಗೆ ಅನುಷ್ಠಾನ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗಮನಹರಿಸಲಾಗುವುದು. ಬಸ್ಸುಗಳ ಸಂಚಾರ ವ್ಯವಸ್ಥೆಗೆ ಮತ್ತಷ್ಟು ಅವಕಾಶ ಕಲ್ಪಿಸಲು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು. ಕಂದಾಯ ಇಲಾಖೆಯಿಂದ ಆಗಬೇಕಿರುವ ಕೆಲಸಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಡಿ ಪೋಡುಗಳ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಸ್ಥಳೀಯ ಶಾಲೆಗಳಲ್ಲಿ ವ್ಯಾಸಂಗ ಮುಗಿದ ಬಳಿಕ ಮುಂದಿನ ತರಗತಿಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಬೇಡಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಲ್ಲಾ ದಿನಗಳಲ್ಲೂ ವೈದ್ಯರ ಸೇವೆ ಲಭ್ಯವಾಗುವಂತೆ ಆರೋಗ್ಯ ಇಲಾಖೆ ನಿಯೋಜನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.

 ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಆಯಾ ಇಲಾಖೆಯಿಂದ ಅನುಷ್ಠಾನ ಮಾಡುತ್ತಿರುವ ಯೋಜನೆ ಕಾರ್ಯಕ್ರಮಗಳು ಹಾಗೂ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. 

  ಕಂದಾಯ ಇಲಾಖೆ ವತಿಯಿಂದ ವಿಧವಾ ವೇತನ, ವೃದ್ದಾಪ್ಯ ವೇತನ ಇತರೆ ಪಿಂಚಣಿ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಕೃಷಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಟಾರ್ಪಲಿನ್, ತೋಟಗಾರಿಕೆ ಇಲಾಖೆಯಿಂದ ತರಕಾರಿ ಬೀಜ ನೀಡಲಾಯಿತು. 

   ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಣಿನಾಯ್ಕ, ಸದಸ್ಯರಾದ ಎಂ. ಮಹೇಶ್, ಕುಮಾರಿಬಾಯಿ ಶಿವನಾಯ್ಕ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಪ್ರೇಮ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಅಬಕಾರಿ ಉಪ ಆಯುಕ್ತರಾದ ಕೆ.ಎಸ್. ಮುರಳಿ, ವಲಯ ಅರಣ್ಯ ಅಧಿಕಾರಿ ಕೆ. ಸುರೇಶ್, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.