ಮೈಸೂರು: ವ್ಯಕ್ತಿಯೊಬ್ಬ ಜನರಿಗೆ ವೈದ್ಯನೆಂದು ನಂಬಿಸಿ ಕ್ಲಿನಿಕ್ ನಡೆಸುತ್ತಿದ್ದ ಘಟನೆ ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿ ನಡೆದಿದ್ದು, ತಾಲೂಕು ಆಡಳಿತ ಕೋವಿಡ್ ನಿಯಮ ಪಾಲನೆ ಪರಿಶೀಲನೆಗೆ ತೆರಳಿದಾಗ ಸಿಕ್ಕಿಬಿದ್ದಿದ್ದಾನೆ
ಕೊರೋನಾ ಸೋಂಕಿನ ನೆಪ ಹೇಳಿಕೊಂಡು ಒಂದಲ್ಲ ಒಂದು ರೀತಿಯಿಂದ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಈ ನಡುವೆ ವೈದ್ಯನೇ ಅಲ್ಲದ ಜೋಸೆಫ್ ಎಂಬ ವ್ಯಕ್ತಿಯೊಬ್ಬ ತಾನು ವೈದ್ಯನೆಂದು ಜನರನ್ನು ನಂಬಿಸಿ ಜನರಿಗೆ ಔಷಧಿ ನೀಡಿ ಹಣ ಸಂಪಾದನೆ ಮಾಡುತ್ತಿದ್ದನು. ಆದರೆ ಯಾರಿಗೂ ಈತ ನಕಲಿ ವೈದ್ಯ ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.
ಸಣ್ಣ ಪುಟ್ಟ ಕಾಯಿಲೆಗಳೆಂದು ಬರುವವರಿಗೆ ಮಾತ್ರೆ ಟಾನಿಕ್ ನೀಡಿ ಕಳುಹಿಸುತ್ತಿದ್ದನು. ಜತೆಗೆ ಗ್ರಾಮಸ್ಥರಿಗೂ ಈತನ ಪೂರ್ವಾಪರ ತಿಳಿದಿರಲಿಲ್ಲ. ಆದ್ದರಿಂದ ಎಂಬಿಬಿಎಸ್ ಓದಿದ ವೈದ್ಯನೇ ಇರಬಹುದೆಂದು ನಂಬಿದ್ದರು. ಈ ಮಧ್ಯೆ ಇಡೀ ದೇಶ ಕೊರೋನಾದಿಂದ ನರಳುತ್ತಿದ್ದರೆ, ಈತ ಜ್ವರ ನೆಗಡಿ ಎಂದು ಬಂದವರಿಗೆಲ್ಲ ಮಾತ್ರೆ ನೀಡಿ ಕಳುಹಿಸುತ್ತಿದ್ದನು. ಜನ ಕೂಡ ಇಲ್ಲಿಗೆ ಬರಲಾರಂಭಿಸಿದ್ದರು. ಆದರೆ ತನ್ನ ಕ್ಲಿನಿಕ್ ನಿಯಮಗಳನ್ನು ಪಾಲಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ತಾಲೂಕು ಆಡಳಿತಕ್ಕೆ ದೂರು ನೀಡಲಾಗಿತ್ತು.
ದೂರನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ, ಪೊಲೀಸ್ ಉಪಾಧೀಕ್ಷಕ ಗೋವಿಂದರಾಜು, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ ಡಾ.ಈಶ್ವರ್, ಹುಲ್ಲಹಳ್ಳಿ ಹೋಬಳಿಯ ಉಪ ತಹಸೀಲ್ದಾರ್ ಶಿವಕುಮಾರ್ ಅವರು ಹುರಾ ಗ್ರಾಮದಲ್ಲಿ ನಕಲಿ ವೈದ್ಯ ಜೋಸೆಫ್ ನಡೆಸುತ್ತಿದ್ದ ಕ್ಲಿನಿಕ್ ಗೆ ಪರಿಶೀಲನೆ ನಡೆಸುವ ಸಲುವಾಗಿ ತೆರಳಿದ್ದರು.
ಕ್ಲಿನಿಕ್ ತೆರಳಿ ಪರಿಶೀಲನೆ ನಡೆಸುವ ತನಕ ಜೋಸೆಫ್ ಒಬ್ಬ ನಕಲಿ ವೈದ್ಯ ಎಂಬ ಚಿಕ್ಕ ಅನುಮಾನವೂ ಬಂದಿರಲಿಲ್ಲ. ಆದರೆ ಕ್ಲಿನಿಕ್ ಗೆ ತೆರಳಿ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡಕ್ಕೆ ಈತ ಒಬ್ಬ ನಕಲಿ ವೈದ್ಯ ಎಂಬುದು ಗೊತ್ತಾಗಿದ್ದು, ಕೂಡಲೇ ಕ್ಲಿನಿಕ್ ಮುಚ್ಚಿಸಿದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.