-ಚಿದ್ರೂಪ ಅಂತಃಕರಣ
ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ಅಭ್ಯರ್ಥಿಗಳು ಅಲ್ಲಲ್ಲಿ ಯಾರೋ ಒಬ್ಬರು ಇರಬಹುದು ಆದರೆ ಬಹಳರು ಇರುವರೆಂದು ಭಾವಿಸುವುದು ಹಾವಿನ ಬಾಯಲ್ಲಿ ಸಂಜೀವಿನಿ ಬಯಸಿದಂತೆ. ಹೀಗಿರುವ ಇಂದಿನ ರಾಜಕೀಯ ಸ್ಥಿತಿಗತಿಗೆ ತದ್ವಿರುದ್ಧರಾದ ಧೀಮಂತ, ನಿಸ್ವಾರ್ಥ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಸದಾ ನೆನೆಯುವಾತ್ಮ. ಇಂತಹ ವ್ಯಕ್ತಿಗಳನ್ನು ಜೀವಂತವಾಗಿಟ್ಟು ಅವರ ವಕ್ತಿತ್ವಗಳನ್ನು ಎಲ್ಲೆಡೆ ಬಿತ್ತನೆಮಾಡಿದರಷ್ಟೇ ಸಮಾಜದ ಉದ್ಧಾರ; ಮರೆತರಂತೂ ಈಗಿನ ಅಧೋಗತಿಯು ಮುಂದುವರೆದು ಮನುಕುಲದ ನಾಶ ಖಚಿತ.
ಶಾಂತವೇರಿ ಗೋಪಾಲಗೌಡರು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಆರಗ ಎಂಬ ಹಳ್ಳಿಯಲ್ಲಿ 1923ರಲ್ಲಿ ಜನಿಸಿದರು. ಇವರ ತಂದೆ ಕೊಲ್ಲೂರಯ್ಯ, ತಾಯಿ ಶೇಷಮ್ಮ. ಬಾಲ್ಯದಿಂದಲೂ ಸಾಮಾಜಿಕ ಕಳಕಳಿ ಉಳ್ಳ ಗೋಪಾಲಗೌಡರು ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿರುವ ಸಂದರ್ಭಕ್ಕೆ ಭಾರತ ಸ್ವತಂತ್ರ ಚಳವಳಿಯಲ್ಲಿ ತಮ್ಮ ಅಂತರಂಗದ ಹೋರಾಟದ ಪ್ರಜ್ಞೆಗೆ ನ್ಯಾಯ ಒದಗಿಸಲೊರಟರು. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮೊದಲಾದ ಸಮಾಜವಾದಿ ಹಿರಿಯ ನಾಯಕರ ಪ್ರಭಾವಕ್ಕೆ ಒಳಗಾದ ಗೋಪಾಲಗೌಡರು ಸ್ವಾತಂತ್ರ್ಯಕ್ಕಾಗಿ ಭಾರತೀಯ ತರುಣರನ್ನು ಅಲ್ಲಲ್ಲಿ ತಮ್ಮ ವೈಚಾರಿಕ ಭಾಷಣಗಳ ಮೂಲಕ ಸಂಘಟನಾತ್ಮಕ ಪ್ರತಿಭಟನೆಗೆ ತೊಡಗಿಸಲಾಗಿ ಬ್ರಿಟಿಷ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ ಬಂಧನಕ್ಕೆ ಒಳಗಾಗುವ ಸನ್ನಿವೇಶ ಎದುರಾದಾಗ ಕೆಲ ಸಮಯ ಭೂಗತರಾದರು. ಈ ನಡುವೆ ಹೋರಾಟದ ವೇಳೆ ತಾವೇ ಅನಿವಾರ್ಯವಾಗಿ ದೈರ್ಯದಿಂದ ಒಂದೆರಡು ಬಾರಿ ಜೈಲು ಬಂಧನಕ್ಕೆ ಒಳಗಾದರು. ನಂತರ ಬಿಡುಗಡೆಯ ಕ್ಷಣವೇ ಅವರ ಸಮಾಜವಾದಿ ವಿಚಾರಗಳು ಮತ್ತಷ್ಟು ತೀವ್ರಗತಿಯಲ್ಲಿ ವಿದ್ಯುತ್ ರೂಪ ಪಡೆಯಲಾರಂಭಿಸಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸುವಲ್ಲಿ ಎಲ್ಲರಂತೆ ನೆಲದ ಋಣಕ್ಕೆ ಬದ್ಧರಾದರು.
1948ರಲ್ಲಿ ಜಮೀನ್ದಾರಿ ಪದ್ಧತಿ ವಿರುದ್ಧ ಗೇಣಿದಾರರ ಸಂಘ ಮತ್ತು ರೈತ ಸಂಘಗಳು ಶಿವಮೊಗ್ಗದಲ್ಲಿ ಧ್ವನಿ ಕೂಗಿದ್ದವು. ಈ ಹೋರಾಟವನ್ನು ರಾಷ್ಟ್ರವ್ಯಾಪಿಗೊಳಿಸುವ ಉದ್ದೇಶದಿಂದ ಈ ಎರಡೂ ಸಂಘಗಳನ್ನು ಗೋಪಾಲಗೌಡರು ಸಮಾಜವಾದಿ ಹಿರಿಯ ನಾಯಕರೊಡಗೂಡಿ ‘ಹಿಂದ್ ಕಿಸಾನ್ ಪಂಚಾಯಿತಿ’ಗೆ ವಿಲೀನಗೊಳಿಸಿ ಜಮೀನ್ದಾರಿ ಪದ್ದತಿಯ ಬೇರನ್ನು ಆಳದಿಂದ ಕಿತ್ತೆಸೆಯಲು ಶ್ರಮವಹಿಸಿದರು. ಇದರೊಂದಿಗೆ ಅಖಿಲ ಭಾರತ ಸಮಾಜವಾದಿ ಗುಂಪಿನೊಳಗೆ ಗೋಪಾಲಗೌಡರು ಪ್ರಸಿದ್ಧಿ ಪಡೆದರು.
1951ರಲ್ಲಿ ರೈತರದ್ದೇ ನಿಲುವಿನ ಮತ್ತು ದೀನದಲಿತ, ಸ್ತ್ರೀಯರ ಸ್ವಾತಂತ್ರ್ಯ, ಸಮಾನತೆಗಾಗಿ ಕಾಗೋಡು ಸತ್ಯಾಗ್ರಹದಲ್ಲಿ ತೊಡಗಿಕೊಂಡರು. ಜಮೀನ್ದಾರಿಗಳು ರೈತರನ್ನು, ಕೂಲಿಕಾರರನ್ನು, ಸ್ತ್ರೀಯರನ್ನು ಜೀತದಾಳುಗಳೆಂದು ಪರಿಗಣಿಸಿ ಪುರುಷರಿಗೆ ಕೆಲಸದ ವೇಳೆ ಕಚ್ಚೆಯಲ್ಲಿರಲು ಮತ್ತು ಬೇರೆ ಸಮಯದಲ್ಲಿ ಮಂಡಿಯ ಕೆಳಗೆ ಪಂಚೆ ತೊಡದಂತೆ ಹಾಗೂ ಸ್ತ್ರೀಯರಿಗೆ ಕಾಲಿನ ವರೆಗೆ ಸೀರೆ ಉಡಬಾರದೆಂಬ ನಿರ್ಬಂಧ ಹೇರಿದ್ದರು. ಹೆಚ್ಚು ದುಡಿಸಿಕೊಂಡು ಕಡಿಮೆ ಕೂಲಿ ನೀಡಿ ಅನ್ಯಾಯವೆಸಗುತ್ತಿದ್ದರು. ಈ ಕಾರಣಕ್ಕಾಗಿ ಕಾಗೋಡು ಸತ್ಯಾಗ್ರಹ ನಡೆಸಿ ಜಮೀನ್ದಾರಿಗಳು ಮತ್ತು ಪೊಲೀಸ್ ದಸ್ತಗಿರಿಯ ವಿರುದ್ಧ ತಿರುಗಿಬಿದ್ದು ಸತ್ಯಾಗ್ರಹವನ್ನು ಯಶಸ್ವಿಗೊಳಿಸಿದರು. ಈ ಮುನ್ನಡೆಯಿಂದಾಗಿ ‘ಹಿಂದ್ ಕಿಸಾನ್ ಪಂಚಾಯಿತಿ’ಯ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ಗೋಪಾಲಗೌಡರು ನಿಯೋಜಿತರಾದರು.
1952ರ ಹೊತ್ತಿಗೆ ಗೋಪಾಲಗೌಡರು ಪ್ರಬಲ ಸಮಾಜವಾದಿ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದರು. ಇವರು ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮ ವಿಚಾರಗಳನ್ನು ಸುಲಭವಾಗಿ ಚಾಚುವಷ್ಟು ಕನ್ನಡ, ಹಿಂದಿ, ಇಂಗ್ಲಿಷ್ ಇತರೆ ಭಾಷಾಜ್ಞಾನ ಮತ್ತು ಸಾಹಿತ್ಯ, ತತ್ವಶಾಸ್ತ್ರ, ರಾಜಕೀಯ, ಸಮಾಜಶಾಸ್ತ್ರೀಯ ವಿಷಯಗಳ ಜೊತೆಗೆ ಹಲವು ಕ್ಷೇತ್ರಗಳ ಮಹತ್ವವನ್ನು ಅರಿತ ನುರಿತ ವಿದ್ವಾಂಸರಾಗಿಯೇ ರೂಪುಗೊಂಡಿದ್ದರು. ಹೀಗಾಗಿ 1952ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಮೈಸೂರು ವಿಧಾನ ಸಭೆಯ ಸದಸ್ಯರಾದರು. ಅಧಿಕಾರ ಸ್ವೀಕಾರವಾದ ಮರುಕ್ಷಣವೇ ಸಮಾಜದ ಮಹಾಪರಿವರ್ತನೆಗೆ ರಾಜಕೀಯದ ಮೂಲಕ ಶಾಸನಸಿದ್ಧರಾದರು. ಕರ್ನಾಟಕ ಏಕೀಕರಣ, ಕೋಲಾರದ ಚಿನ್ನದ ಗಣಿಯ ರಾಷ್ಟ್ರೀಕರಣ, ರಸ್ತೆ ಸಾರಿಗೆಯ ರಾಷ್ಟ್ರೀಕರಣ ಇವೇ ಮೊದಲಾದ ಯೋಜನೆಗಳ ಹರಿಕಾರರಾದರು. ಭೂಸುಧಾರಣೆಗೆ ನಾಂದಿಯಾದ ಗೇಣಿ ಶಾಸನ ಮತ್ತು ಇನಾಂ ರದ್ದತಿ ಶಾಸನಗಳ ಬಗೆಗೆ ರಾಷ್ಟ್ರವ್ಯಾಪಿ ಗಮನ ಸೆಳೆಯುವುದರಲ್ಲಿ ಮುಂದಾದರು.
ಹೀಗಿದ್ದರೂ 1957ರ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಗಿಯಿತು. ಆದರೆ ಇವರ ಮನೋಧರ್ಮ ಅಧಿಕಾರದ ಆಸೆಯಲ್ಲ ಬದಲಿಗೆ ಸಾಮಾಜಿಕ ಕಾರ್ಯಗಳ ಚಲನಶೀಲತೆ ಹಾಗಾಗಿ ನಿತ್ಯ ಹೋರಾಟಗಾರರಾಗಿ ಸರ್ಕಾರವನ್ನು ಕಟುವಾಗಿ ಟೀಕಿಸಿ ಸೆರೆಮನೆವಾಸಕ್ಕೆ ಗುರಿಯಾದರು. ಚಿಂತೆಗೀಡಾಗದೆ ಅಥವಾ ಧೃತಿಗೆಡದೆ ಜನರ ವಿಶ್ವಾಸಗಳಿಸಿ ಮತ್ತೆ 1962ರ ಮಹಾ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶಿಸಿದರು. ಅಂದಿನಿಂದ 1972ರವರೆವಿಗೂ ವಿಧಾನ ಸಭೆಯ ಸದಸ್ಯರಾಗಿ ಉಳಿದು ಅಪಾರವಾದ ಸಾಮಾಜಿಕ ಕೈಕಂರ್ಯಗಳಲ್ಲಿ ತೊಡಗಿಕೊಂಡಿದ್ದರು. ಸದಾ ನಾಡಿನ ಉದ್ಧಾರಕ್ಕಾಗಿ ಶ್ರಮಿಸಿ ದಣಿದು ಅನಾರೋಗ್ಯದಿಂದಾಗಿ 1972ರಲ್ಲಿ ತಮ್ಮ ಕೊನೆಉಸಿರೆಳೆದರು. ಇವರು ಸಾಯುವಾಗ ಇವರ ಒಟ್ಟು ಆಸ್ತಿ ಕೇವಲ ಒಂದು ಹುಲ್ಲಿನ ಮನೆ.
ಈಗಿನ ರಾಜಕಾರಣಿಗಳ ಒಟ್ಟು ಆಸ್ತಿ ಪತ್ರವಿರುವುದು ಕೋಟಿ ಲೆಕ್ಕಚಾರಕ್ಕೆ. ಬೇನಾಮಿ ಆಸ್ತಿ ಇರುವುದು ಲೆಕ್ಕವಿಲ್ಲದ ಲೆಕ್ಕಾಚಾರಕ್ಕೆ. ನಾಚಿಕೆ ಎನಿಸಬೇಕು; ಹಣ ಮಾಡಲು ಸಮಾಜ ಸೇವೆ ಎನ್ನುವ ಮುಖವಾಡ ಧರಿಸಿ ದೇಶವನ್ನು ಹಾಳುಮಾಡುತ್ತಿರುವ ಭ್ರಷ್ಟರಿಗೆ. ಈ ಹಿಂದೆ ಗೋಪಾಲಗೌಡರಂಥ ಧೀಮಂತ ಉದ್ದಾಮ ರಾಜಕಾರಣಿಗಳು ಎಷ್ಟೋ ಶ್ರಮವಹಿಸಿ ಸುವ್ಯವಸ್ಥಿತಗೊಳಿಸಿದ ಸಮಾಜವನ್ನು ತಮ್ಮ ಅಧಿಕಾರದ ಸ್ವೇಚ್ಛೆಯಲ್ಲಿ ಹಾಳುಗೆಡುತ್ತಿದ್ದಾರೆ. ಅಂದು ರಾಜಕೀಯಕ್ಕೆ ಪ್ರವೇಶಿಸಲು ಅವರು ಸಾಮಾಜಿಕ ನಿಸ್ವಾರ್ಥ ಸೇವೆ ಎನ್ನುವ ಉದ್ದೇಶವೊಂದನ್ನು ಹಿಡಿದು ಬಂದವರು. ಆದರೆ ಇಂದು ಯಾವುದೇ ನಿಸ್ವಾರ್ಥ ಉದ್ದೇಶವಿಲ್ಲ. ಕೇವಲ ತಾತ, ತಂದೆಯ ಆಸ್ತಿ, ಖಳನಾಮ, ಇವಿದ್ದರೇ ಸಾಕು! ಸುಲಭವಾಗಿ ಕುಟುಂಬ ರಾಜಕಾರಣ ಮಾಡಿ ಮತ್ತದೇ ಮೋಹದ ಅಧಿಕಾರವಿಡಿದು ಮತ್ತಷ್ಟು ಸಂಪತ್ತಿನ ಶೇಖರಣೆಗೆ ಕುತಂತ್ರ ಮಾರ್ಗ ಹುಡುಕುವರು.
ಇಂದಿರಾ ಕಾಂಗ್ರೆಸ್ ಮತ್ತು ನಿಜಲಿಂಗಪ್ಪ ಕಾಂಗ್ರೆಸ್ ಎಂಬ ಇಬ್ಭಾಗದ ಸಂದರ್ಭದಲ್ಲಿ ಗೋಪಾಲಗೌಡರಿಗೆ ಮುಖ್ಯಮಂತ್ರಿ ಪದವಿಗೆ ರಾಜ್ಯಪಾಲರಿಂದ ಕರೆಬರುತ್ತದೆ. ಸಿಕ್ಕ ಈ ಅವಕಾಶವನ್ನು ಇಂದಿನ ಯಾವುದೇ ರಾಜಕಾರಣಿಯಾಗಿದ್ದರೂ ಅದನ್ನು ಶರವೇಗದಲ್ಲಿ ಸ್ವೀಕರಿಸುತ್ತಿದ್ದರು. ಆದರೆ ಗೋಪಾಲಗೌಡರು ಒದಗಿಬಂದ ಈ ಆಹ್ವಾನವನ್ನು “ಮುಖ್ಯಮಂತ್ರಿಯಾಗುವಷ್ಟು ಜನಾದೇಶ ಅಥವಾ ಜನರ ಅಭಿಪ್ರಾಯ ನನ್ನ ಪರವಾಗಿಲ್ಲದಿರುವುದರಿಂದ ಮುಖ್ಯಮಂತ್ರಿ ಹುದ್ದೆ ನನಗಲ್ಲ” ಎಂದು ವಿನಮ್ರವಾಗಿಯೇ ತಿರಸ್ಕರಿಸಿದರು. ಅಧಿಕಾರಕ್ಕೆ ಆಸೆ ಪಡದ ಆತ್ಮಾಭಿಮಾನದ ಗೋಪಾಲಗೌಡರು ಪ್ರಾಮಾಣಿಕ ಜೀವನವನ್ನಷ್ಟೇ ಅಪೇಕ್ಷಿಸಿದವರು.
ಪ್ರಕೃತಿ ಸಾಹಿತಿಯಾದ ಪೂರ್ಣ ಚಂದ್ರ ತೇಜಸ್ವಿ ಅವರು ತಮ್ಮ ಅಣ್ಣನ ನೆನಪು ಕೃತಿಯಲ್ಲಿ ಗೋಪಾಲಗೌಡರ ಬಗ್ಗೆ ಹೇಳುವ ಮಾತು. “ಒಮ್ಮೆ ನಾನು ಅಣ್ಣನ ಜೊತೆ ಇಂಗ್ಲಾದಿಗೆ ಹೋದಾಗ ಅಲ್ಲಿದ್ದ ಶ್ರೀ ಮಾನಪ್ಪನವರು, ವಿಜಯದೇವರವರು ಅಣ್ಣನ ಜೊತೆ ಮಾತನಾಡುತ್ತಾ; ಗೋಪಾಲಗೌಡ ಚಳುವಳಿಗಳಲ್ಲಿ ಮತ್ತು ಇತರೆಡೆಗಳಲ್ಲಿ ಭಾಷಣ ಮಾಡುವಾಗ ನಿಮ್ಮ ಕಲ್ಕಿ, ನೇಗಿಲಯೋಗಿ ಮುಂತಾದ ಪದ್ಯಗಳನ್ನೇ ಉಪಯೋಗಿಸಿ ಉದಾಹರಣೆ ಕೊಡುತ್ತಾನಂತೆ, ಎಂದು ಅಣ್ಣನ ಪದ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎನ್ನುವಂತೆ ಹೇಳಿದ್ದು ನನಗೆ ನೆನಪಿದೆ. ಇದರಿಂದ ನನಗೆ ಗೋಪಾಲ ಗೌಡರ ಬಗ್ಗೆ ಕುತೂಹಲವೂ, ಸದಭಿಪ್ರಾಯವೂ ಪ್ರಾರಂಭವಾಯ್ತು. ರಾಜಕಾರಣಿಗಳ ಬಗ್ಗೆ ಅಣ್ಣನಿಗಿರುವ ತಾತ್ಸಾರದ ಪ್ರಭಾವದಿಂದ ನನಗೂ ರಾಜಕಾರಣಿಗಳ ಬಗ್ಗೆ ಉಪೇಕ್ಷೆಯೇ ಇತ್ತು. ಆದರೆ ಗೋಪಾಲಗೌಡ ಕಥೆ, ಕವನ ಓದುವ ಮನುಷ್ಯನಾದರೇ, ರಾಜಕೀಯಕ್ಕೆ ಅಣ್ಣನ ಕವಿತೆಗಳನ್ನು ಬಳಸುವಷ್ಟು ಸೂಕ್ಷ್ಮಜ್ಞನಾದರೆ ಈತ ವಿಶಿಷ್ಟ ರೀತಿಯ ರಾಜಕಾರಣಿಯೇ ಅನ್ನಿಸಿತ್ತು.” ಎಂದು ಹೇಳುವಾಗ ಇಂತಹ ಮಹಾಶಯರ ನೆನಪಿನ ಪುಟದಲ್ಲಿ ಒಳಿತಾಗಿ ಸೇರಿದ ಗೋಪಾಲಗೌಡರ ವ್ಯಕ್ತಿತ್ವ ಎಂಥದ್ದು ಎಂದು ಮನವರಿಕೆಯಾಗುವ ವಿಚಾರವನ್ನು ನಾವೆಲ್ಲರೂ ಅರಿಯಲೇಬೇಕು. ಗೋಪಾಲಗೌಡರ ಬಗೆಗಿನ ಈ ಮೇಲಿನ ವಿವರ ಕೇವಲ ಸಾಸಿವೆ ಕಾಳಿನಷ್ಟು. ಅವರ ಬಗ್ಗೆ ‘ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟ’ ಎಂಬ ಡಾ. ಕಾಳೇಗೌಡ ನಾಗವಾರ ಮತ್ತು ಡಾ. ಜಿ. ಬಿ ಆನಂದಮೂರ್ತಿ ಅವರ ಸಂಪಾದಿತ ಕೃತಿ ಬಹಳಷ್ಟು ಮಾಹಿತಿಯನ್ನು ನೀಡುತ್ತದೆ. ಪ್ರಜಾಪ್ರಭುತ್ವದ ಎಲ್ಲಾ ರಾಜಕಾರಣಿಗಳಿಗೂ, ಮತದಾರರಿಗೂ ಗೋಪಾಲಗೌಡರ ಸರಳ, ನಿಸ್ವಾರ್ಥ, ಪ್ರಾಮಾಣಿಕ ವ್ಯಕ್ತಿತ್ವ ಅರಿವಾಗಬೇಕು ಅನುಸರಣೆಯಾಗಬೇಕು.

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ.
ಎಚ್. ಡಿ. ಕೋಟೆ, ಮೈಸೂರು.
ದೂರವಾಣಿ ಸಂಖ್ಯೆ; 8884684726
Gmail I’d:- manjunathabr709@gmail.com