ಮಹೇಶ್ ನಾಯಕ್
maheshyoga10@gmail.com
.9448980010
ಸತತ ಹತ್ತು ವರ್ಷಗಳಿಂದ ಮೈಸೂರಿನ ಓವಲ್ ಮೈದಾನದಲ್ಲಿ ಯಾವುದೇ ಪ್ರತಿಫಲದ ಆಸೆಯಿಲ್ಲದೆ ಉಚಿತವಾಗಿ ಅಥ್ಲೆಟಿಕ್ಸ್ ತರಬೇತಿ ನೀಡುತ್ತಿರುವ ರವಿ ಟಿ. ಎಸ್. ಅವರು, ಕ್ರೀಡಾ ಕ್ಷೇತ್ರದಲ್ಲಿ ಸೇವೆ, ಶಿಸ್ತು ಮತ್ತು ಸಮರ್ಪಣೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಯುವ ಕ್ರೀಡಾಪಟುಗಳಿಗೆ ದಾರಿ ತೋರಿಸಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ. ಕ್ರೀಡೆಯಲ್ಲಿ ಸಾಧನೆ ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದೇ ಇವರ ತರಬೇತಿಯ ಪ್ರಮುಖ ಉದ್ದೇಶ. ಇವರಿಂದ ತರಬೇತಿ ಪಡೆದ 21 ಜನ ಭಾರತೀಯ ಸೇನೆ, ಪ್ಯಾರಾಮೆಲಿಟರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಇಲ್ಲಿ ಕೂಡ 2016 ರಿಂದ ಬುನಾದಿ ತರಬೇತಿ ಹಾಗೂ ಪೊಲೀಸ್ ವಾರ್ಷಿಕ ಕ್ರೀಡಾಪಟುಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ 13 ಕರ್ನಾಟಕ ಎನ್ಸಿಸಿ ಬೆಟಾಲಿಯನ್ ಇಲ್ಲಿ ಅಲುಮಿನ ಲೈಫ್ ಮೆಂಬರ್ ಆಗಿ ಕೋ ಆರ್ಡಿನೇಟರ್ ಆಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿರುತ್ತಾರೆ ಇವರ ಸೇವೆಗಾಗಿ ಪೊಲೀಸ್ ಇಲಾಖೆಯ ಕಮಿಷನರ್ ಹಾಗೂ ಮೈಸೂರು ಎನ್ ಸಿ ಸಿ ಗ್ರೂಪ್ ಕಮಾಂಡರ್ ರವರಿಂದ ಪ್ರಶಂಸನ ಪತ್ರಗಳನ್ನು ಪಡೆದಿದ್ದಾರೆ
2017ರಲ್ಲಿ ಉತ್ತಮ ತರಬೇತಿದಾರ ಪ್ರಶಸ್ತಿ ಪಡೆದಿದ್ದಾರೆ.2025 ನೇ ಸಾಲಿನ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.
ರವಿ ಅವರು ಕ್ರೀಡಾಪಟುಗಳು ಮೈದಾನಕ್ಕೆ ಬರುವ ಸಮಯಕ್ಕಿಂತಲೂ ಮುಂಚೆಯೇ ತಾವೇ ಮೈದಾನಕ್ಕೆ ಆಗಮಿಸುತ್ತಾರೆ. ಮಕ್ಕಳಿಗೆ ಮೊದಲು ಕಲಿಸುವ ಪಾಠ ಎಂದರೆ ಸಮಯಪಾಲನೆ, ಕ್ರೀಡಾಂಗಣದ ಸ್ವಚ್ಛತೆ ಮತ್ತು ಶಿಸ್ತು. ಈ ವಿಷಯಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಎಂಬುದೇ ಇಲ್ಲ. ಇದೇ ಕಾರಣಕ್ಕೆ ಅವರು “ಶಿಸ್ತಿನ ಸಿಪಾಯಿ” ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಅವರ ಮಾತು ಕೆಲವೊಮ್ಮೆ ಕಠಿಣವಾಗಿರಬಹುದು; ಆದರೆ ಅವರ ಮನಸ್ಸು ಮಗುವಿನಂತೆಯೇ ನಿರ್ಮಲ. ಶಿಸ್ತು ಮತ್ತು ಕ್ರೀಡೆಗೆ ಸಂಪೂರ್ಣವಾಗಿ ಅರ್ಪಿತವಾದ ಹೃದಯವೇ ಅವರ ನಿಜವಾದ ಗುರುತು.

ಕ್ರೀಡಾ ಶ್ರಮಜೀವಿ
ರವಿ ಟಿ. ಎಸ್. ಅವರ ಶ್ರಮ ಸಾಮಾನ್ಯವಲ್ಲ; ಅದು ಸ್ವಲ್ಪ ಜಾಸ್ತಿಯೇ. ಕ್ರೀಡಾಪಟುಗಳ ಮೇಲೆ ಅನ್ಯಾಯ ನಡೆಯುತ್ತಿರುವುದನ್ನು ಕಂಡರೆ, ಅದನ್ನು ಸರಿಪಡಿಸದೆ ಅವರಿಗೆ ನಿದ್ರೆ ಬರುವುದೇ ಇಲ್ಲ. ಕಾರಣ, ಅವರ ರಕ್ತದಲ್ಲೇ ಹೋರಾಟದ ಛಲ ಹರಿದುಕೊಂಡಿದೆ. ಇದು ಕೇವಲ ಒಬ್ಬರ ಅಭಿಪ್ರಾಯವಲ್ಲ. ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ಕ್ರೀಡಾಪಟುವಿಗೆ ಅನ್ಯಾಯ, ಮೋಸ ಅಥವಾ ಕಡೆಗಣನೆ ಆಗುತ್ತಿದ್ದರೆ, ಮೊದಲು ಧ್ವನಿ ಎತ್ತುವ ವ್ಯಕ್ತಿ ರವಿ ಟಿ. ಎಸ್. ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಕೆಲವರು “ನಮಗೆ ಇಂತಹವರು ಬೇಕೆ?” ಎಂದು ಪ್ರಶ್ನಿಸಬಹುದು. ಆದರೆ ವಾಸ್ತವದಲ್ಲಿ ಕ್ರೀಡೆಗೆ ಇಂತಹ ವ್ಯಕ್ತಿಗಳೇ ಅತ್ಯಾವಶ್ಯಕ. ಕ್ರೀಡೆಯ ಜೊತೆಗೆ ಹೋರಾಟದ ಕಿಚ್ಚು ಹೊಂದಿ, ನ್ಯಾಯ ದೊರಕಿಸಿಕೊಡಲು ಒಬ್ಬನೇ ಸೇನೆಯಂತೆ ನಿಲ್ಲುವವರು. ನಿಜಾರ್ಥದಲ್ಲಿ ಅವರನ್ನು “ಒನ್ ಮ್ಯಾನ್ ಆರ್ಮಿ” ಎಂದು ಕರೆಯಬಹುದು.

ಶಿಕ್ಷಣ ಮತ್ತು ಹಿನ್ನೆಲೆ
ರವಿ ಟಿ. ಎಸ್. ಅವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ತಾಳೂರು ಗ್ರಾಮದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿಯೇ ಪೂರ್ಣಗೊಳಿಸಿದರು. ನಂತರ ಮೈಸೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಯಶಸ್ವಿಯಾಗಿ ಮುಗಿಸಿದರು.
ಅನಂತರ ಮಾನಸಗಂಗೋತ್ರಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಬಿ.ಪಿ.ಇಡಿ ,ಎಂ.ಪಿ.ಇಡಿ ಪದವಿ ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಡಿಪ್ಲೋಮೋ ಇನ್ ಕೋಚಿಂಗ್ ಅಥ್ಲೆಟಿಕ್ಸ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತಾ ಪರೀಕ್ಷೆಯಾದ K-SET ಅರ್ಹತೆಯನ್ನೂ ಪಡೆದಿದ್ದಾರೆ.

ಕ್ರೀಡಾ ಸಾಧನೆಗಳು
ರವಿ ಟಿ. ಎಸ್. ರವರು ಕರ್ನಾಟಕ ರಾಜ್ಯ ಮಟ್ಟದಲ್ಲಿ ಮೂರು ಪದಕಗಳು,ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಅಥ್ಲೆಟಿಕ್ಸ್ ಕೂಟದಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಮೂರು ಬಾರಿ ಪ್ರತಿನಿಧಿಸಿ ಕೊಲ್ಕತ್ತಾ, ಪಟಿಯಾಲಾ ಹಾಗೂ ಮಂಗಳೂರಿನಲ್ಲಿ ಭಾಗವಹಿಸಿರುತ್ತಾರೆ
ಅವರು ವಿಶ್ವವಿದ್ಯಾಲಯದ ದಾಖಲೆಯನ್ನು ಹೊಂದಿದ್ದಾರೆ(University Record Holder) ಇದುವರೆಗೂ ದಾಖಲೆಯು ಅವರ ಹೆಸರಿನಲ್ಲೇ ಇದೆ
2016 ರಿಂದ ಅಥ್ಲೆಟಿಕ್ಸ್ ತರಬೇತಿದಾರರಾಗಿ,ಮಾನಸ ಗಂಗೋತ್ರಿ ಯ ಕ್ರೀಡಾ ಕಾರ್ಯದರ್ಶಿಯಾಗಿ ,ಯುವರಾಜ ಕಾಲೇಜಿನಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿ ಪ್ರಸ್ತುತ ದೈಹಿಕ ಶಿಕ್ಷಕರಾಗಿ ಮಹಾರಾಜ ಕಾಲೇಜಿನಲ್ಲಿ ಎನ್‌ಸಿಸಿ ಅಧಿಕಾರಿಯಾಗಿಯೂ ಕಳೆದ ಹತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ

ಪರಿಸರ ಮತ್ತು ಆರೋಗ್ಯದ ಬಗ್ಗೆ ಕಾಳಜಿ
ರವಿ ಟಿ. ಎಸ್. ಅವರು ಕ್ರೀಡಾಪಟುಗಳಿಗೆ ಕೇವಲ ತರಬೇತಿ ನೀಡುವುದರಲ್ಲೇ ಸೀಮಿತರಾಗಿಲ್ಲ. ಕ್ರೀಡೆಯ ಜೊತೆಗೆ ಮೈದಾನದ ಸುತ್ತಮುತ್ತ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಆವರಣಗಳಲ್ಲಿ 2009ರಿಂದ ಈಗಾಗಲೇ 58 ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕಾರ್ಯಕ್ಕೂ ಸಮಾನ ಮಹತ್ವ ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಅವರೊಂದಿಗೆ ಭಾಗವಹಿಸುವ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು, ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ.
ಮೈದಾನದಲ್ಲಿ ವ್ಯಾಯಾಮ ಮಾಡುವ ವೇಳೆ ಧೂಳು ಅತಿಯಾಗಿ ಏರಿಬರುತ್ತಿರುವುದನ್ನು ಗಮನಿಸಿದ ಅವರು, ಕ್ರೀಡಾಪಟುಗಳ ಆರೋಗ್ಯದ ದೃಷ್ಟಿಯಿಂದ ಮೈದಾನದ ಸುತ್ತ ನೀರು ಸಿಂಪಡಿಸುವ ಸ್ಪ್ರಿಂಕ್ಲರ್ ಉಪಕರಣಗಳನ್ನು ತಮ್ಮ ಸ್ವಂತ ಹಣದಿಂದ ಹಾಗೂ ಸಹಪಾಠಿಗಳ ಸಹಕಾರದಿಂದ ಖರೀದಿ ಮಾಡಿ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ಕಾಳಜಿ ತೋರುವ ಅವರ ಸೇವಾಭಾವನೆ ಎಲ್ಲರಿಗೂ ಪ್ರೇರಣೆಯಾಗಿದೆ
ವಿಶ್ವವಿದ್ಯಾನಿಲಯವು ನಮಗೇನು ಮಾಡಿತು ಎಂಬುದಕ್ಕಿಂತ ನಾನು ವಿಶ್ವವಿದ್ಯಾನಿಲಯ ಮತ್ತು ಕ್ರೀಡಾಪಟುಗಳಿಗೆ ಏನು ಮಾಡಿದೆ ಎಂಬುದು ಮುಖ್ಯ ಎಂದು ಹೇಳುತ್ತಾರೆ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಯಾವುದೇ ಭೇದಭಾವ ಇರಕೂಡದು ಎಲ್ಲರಿಗೂ ಕ್ರೀಡೆ ಅದರ ಉಪಯೋಗ ಮತ್ತು ಕ್ರೀಡಾ ಮನೋಭಾವನೆಯನ್ನು ಬೆಳೆಸಬೇಕು ಎಂದು ತಿಳಿಸುತ್ತಾರೆ
